ಜಾಗತಿಕ ತಲ್ಲಣಗಳಿಗೆ ಬುದ್ಧನ ಶಾಂತಿ ಸಂದೇಶ ಅಗತ್ಯ

ಕಲಬುರಗಿ:ಡಿ.08: ಹಿಂಸೆ, ಅನ್ಯಾಯ, ಅಶಾಂತಿ, ಶೋಷಣೆ, ಭಯೋತ್ಪಾದನೆಯಂತಹ ಜಾಗತಿಕ ತಲ್ಲಣಗಳಿಂದ ಬಳಲುತ್ತಿರುವ ಪ್ರಸ್ತುತ ಸಮಾಜಕ್ಕೆ ಮಹಾತ್ಮ ಗೌತಮ ಬುದ್ಧ ಅವರು ಸಾವಿರಾರು ವರ್ಷಗಳ ಹಿಂದೆಯೇ ನೀಡಿರುವ ಹಾಗೂ ಅವುಗಳನ್ನು ಆಚರಿಸಿ ತೋರಿಸಿರುವ ತತ್ವಗಳು ಔಷಧಿಯಂತೆ ಕಾರ್ಯಮಾಡುತ್ತವೆ ಎಂದು ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಡಾ.ಕೆ.ಎಸ್.ಬಂಧು ಸಿದ್ದೇಶ್ವರ ಹೇಳಿದರು.
ನಗರದ ಜಗತ್ ವೃತ್ತದಲ್ಲಿರುವ ಮಹಾತ್ಮ ಗೌತವ ಬುದ್ಧ ಪ್ರತಿಮೆಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಶುಕ್ರವಾರ ಜರುಗಿದ ‘ಬೋಧಿ ದಿನಾಚರಣೆ’ಯಲ್ಲಿ ಬುದ್ಧವಂದನೆ ಸಲ್ಲಿಸಿ ನಂತರ ಮಾತನಾಡುತ್ತಿದ್ದರು.
ಪ್ರಸ್ತುತ ಸಮಾಜದಲ್ಲಿಯೂ ಜನರು ಮೌಢ್ಯತೆ, ಕಂದಾಚಾರ, ಅಂಧಶೃದ್ಧೆಗಳಂತಹ ಆಚರಣೆಯಲ್ಲಿರುವುದು ಬೇಸರದ ಸಂಗತಿಯಾಗಿದ್ದು, ಇಂತಹ ಅನಿಷ್ಠತೆಗಳಿಂದ ಹೊರಬರಬೇಕು. ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಬುದ್ಧ-ಬಸವ-ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳು ಅಳವಡಿಸಿಕೊಳ್ಳಬೇಕು. ‘ಬುದ್ಧ’ ಎಂದರೆ ‘ಶಾಂತಿ’, ‘ಜ್ಞಾನ’ದ ಸಂಕೇತವಾಗಿದ್ದಾರೆ. ಅವರ ತತ್ವದ ಮಹಾ ಬೆಳಕಿನಲ್ಲಿ ಸಾಗಿದರೆ ಬದುಕು ಸುಂದರವಾಗುತ್ತದೆ. ಬುದ್ಧನ ಸಂದೇಶ ಪಾಲಿಸುವುದು ತುಂಬಾ ಅಗತ್ಯವಾಗಿದೆಯೆಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ರಾಜನಾಗಿದ್ದ ಸಿದ್ದಾರ್ಥ ಅವರು ಇಡೀ ತಮ್ಮ ರಾಜ್ಯ, ಸರ್ವಸ್ವವನ್ನು ತ್ಯಾಗ ಮಾಡಿ, ಬೋಧಿ ವೃಕ್ಷದ ಕೆಳಗಡೆ ನಿರಂತರವಾಗಿ 49 ದಿವಸಗಳ ಕಾಲ ಧ್ಯಾನ ಮಾಡಿ, ಜ್ಞಾನೋದಯವನ್ನು ಪಡೆದ ದಿನವನ್ನು ‘ಬೋಧಿ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್, ಪ್ರಮುಖರಾದ ಭಜರಂಗ ಕುಲಕರ್ಣಿ, ಇರ್ಫಾನ್ ಶೇಖ್ ಸೇರಿದಂತೆ ಇನ್ನಿತರರಿದ್ದರು.