ಜಾಗತಿಕ ಗಮನ ಸೆಳೆದ ಕೋವ್ಯಾಕ್ಸಿನ್

ನವದೆಹಲಿ, ಡಿ.೨೫- ಕೊರೋನೋ ಸೋಂಕಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ “ಕೋವ್ಯಾಕ್ಸಿನ್” ಲಸಿಕೆ ತನ್ನ ಪ್ರತಿಕಾಯ ಶಕ್ತಿ ಸಾಮರ್ಥ್ಯ ದಿಂದ ಜಾಗತಿಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಜಂಟಿಯಾಗಿ “ಕೋವಾಕ್ಸಿನ್ ” ಲಸಿಕೆ ಅಭಿವೃದ್ಧಿಪಡಿಸಿದ್ದು ಸದ್ಯ ದೇಶದಲ್ಲಿ ಮೂರನೇ ಹಂತದ ಪ್ರಯೋಗದಲ್ಲಿ ನಿರತವಾಗಿದೆ.

ಕೊವಾಕ್ಸಿನ್ ಲಸಿಕೆ ಜಾಗತಿಕ ಗಮನಸೆಳೆದಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ,ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಪ್ರಭಾವಶಾಲಿ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ.

ಭಾರತದಲ್ಲಿ ಒಂದು ಮತ್ತು ಎರಡನೇ ಹಂತದ ಪ್ರಯೋಗಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ದಾರಿಮಾಡಿಕೊಟ್ಟಿವೆ. ಸದ್ಯ ದೇಶದ ೨೨ ನಗರಗಳಲ್ಲಿ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ ಎಂದು ತಿಳಿಸಿದೆ.

ಸ್ವಯಂಸೇವಕರ ಆಹ್ವಾನ:

ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೋರೋನಾ ಲಸಿಕೆ ಕೊವಾಕ್ಸಿನ್ ನ ಮೂರನೇ ಹಂತದ ಪ್ರಯೋಗಕ್ಕಾಗಿ ಸ್ವಯಂಸೇವಕರನ್ನು ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಹ್ವಾನ ನೀಡಿದೆ.

ಮೂರನೆ ಹಂತದ ಪ್ರಯೋಗದಲ್ಲಿ ಒಳಗಾಗುವ ಸ್ವಯಂಸೇವಕರು ನೋಂದಣಿ ಮಾಡಿಕೊಳ್ಳುವಂತೆಯೂ ಮನವಿ ಮಾಡಿದೆ.

ಈ ಸಂಬಂಧ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ತನ್ನ ಜಾಹೀರಾತಿನಲ್ಲಿ ಸ್ವಯಂಸೇವಕರು ಮೂರನೇ ಹಂತದ ಲಸಿಕೆಗೆ ಇನ್ನೊಂದೆಡೆ ಮಾಡಿಕೊಳ್ಳುವಂತೆ ಮನವಿ ಮಾಡಿದೆ ಎಂದು ಸಮುದಾಯ ವೈದ್ಯಕೀಯ ಕೇಂದ್ರದ ವೈದ್ಯ ಡಾ. ಸಂಜಯ್ ಕೆ ತಿಳಿಸಿದ್ದಾರೆ.