ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧ ಪರಿಣಾಮ

ನವದೆಹಲಿ,ಅ.೨೦-ಜಾಗತಿಕ ಆರ್ಥಿಕತೆಯು ಯುದ್ದಗಳ ಭಾರವನ್ನು ಹೊರುತ್ತಿದೆ ,ಯುದ್ದಗಳು ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೌಟಿಲ್ಯ ಎಕನಾಮಿಕ್ ಕಾನ್‌ಕ್ಲೇವ್ ೨೦೨೩ ರಲ್ಲಿ ಉದ್ಘಾಟನಾ ಭಾಷಣವನ್ನು ಮಾಡಿದ ಸೀತಾರಾಮನ್, ಇಂದು ನೀವು ಯುದ್ಧಗಳನ್ನು ಮಾಡುತ್ತೀರಿ ನಾವು ಅದರ ಭಾರವನ್ನು ಹೊರತ್ತೇವೆ ಎಂದು ಹೇಳಿದರು.
ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಈ ಮಾತಿನ ಚಾಟಿ ಬೀಸಿದ್ದಾರೆ.
ಈ ಯುದ್ದದಲ್ಲಿ ಈಗಾಗಲೇ ೫,೧೦೦ ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದು ೧೨,೦೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜಾಗತಿಕ ಭಯೋತ್ಪಾದನೆಯಿಂದ ಎದುರಿಸಬೇಕಾದ ಸವಾಲುಗಳನ್ನು ಸೀತಾರಾಮನ್ ಎತ್ತಿ ತೋರಿಸಿದರು .ಹೂಡಿಕೆ ನಿರ್ಧಾರಗಳನ್ನು ಮಾಡುವಾಗ ಹೂಡಿಕೆದಾರರು ಮತ್ತು ವ್ಯವಹಾರಗಳು ಅಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಒತ್ತಿ ಹೇಳಿದರು.
ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳು (ಎಂಡಿಬಿ) ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳು ಕಡಿಮೆ ಪರಿಣಾಮಕಾರಿಯಾಗುತ್ತಿವೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಲದ ಪರಿಸ್ಥಿತಿಯ ಬಗ್ಗೆ ಜಾಗೃತವಾಗಿದೆ ಮತ್ತು ಮುಂಬರುವ ಪೀಳಿಗೆಗೆ ಹೊರೆಯಾಗದಂತೆ ನೋಡಿಕೊಳ್ಳಲು ಹಣಕಾಸಿನ ನಿರ್ವಹಣೆಯನ್ನು ಕೈಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಸೀತಾರಾಮನ್, ೨೦೧೪ ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಜನ್-ಧನ್ ಯೋಜನೆ (ಪಿಎಂಜೆಡಿವೈ), ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು ತರುವ ದೊಡ್ಡ ಸಾಧನವಾಗಿ ಹೊರಹೊಮ್ಮಿದೆ.
೫೦ ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ ಪಿಎಂಜೆಡಿವೈ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅವರು ಹೇಳಿದರು.