
ಲಂಡನ್, ಮೇ ೬- ಒಂದು ಹಂತದಲ್ಲಿ ತನ್ನ ರೌದ್ರರೂಪದಲ್ಲಿ ಹರಡುವ ಮೂಲಕ ವಿಶ್ವವನ್ನೇ ನಲುಗಿಸಿದ್ದ ಮಾರಕ ಕೋವಿಡ್ ಸೋಂಕು ಇದೀಗ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಜನತೆಗೆ ನೆಮ್ಮದಿ ಮೂಡುವಂತೆ ಮಾಡಿದೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಕೂಡ ಇದೀಗ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಅಂತ್ಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದೆ.
ಮೂರು ವರ್ಷಗಳ ಹಿಂದೆ ಡಬ್ಲ್ಯುಹೆಚ್‌ಒ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿತ್ತು. ಬಳಿಕ ಇಡೀ ವಿಶ್ವವೇ ಸೋಂಕಿನ ಅಬ್ಬರಕ್ಕೆ ತತ್ತರಿಸಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಸಹಜವಾಗಿಯೇ ಡಬ್ಲ್ಯುಹೆಚ್‌ಒನ ಸದ್ಯದ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ಹೊಸ ಆಶಾಕಿರಣ ಮೂಡುವಂತೆ ಮಾಡಿದೆ. ಯಾಕೆಂದರೆ ಕೆಲವು ರಾಷ್ಟ್ರಗಳಲ್ಲಿ ಈಗಲೂ ಅಲ್ಪ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿತ್ತು. ಅದರಲ್ಲೂ ೨೦೨೧ರ ಜನವರಿಯಲ್ಲಿ ಜಾಗತಿಕ ಮಟ್ಟದಲ್ಲಿ ಕೋವಿಡ್ ಸಾವಿನ ಪ್ರಮಾಣ ವಾರಕ್ಕೆ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚಿತ್ತು. ಆದರೆ ಸದ್ಯ ಎಪ್ರಿಲ್ ೨೪ಕ್ಕೆ ಈ ಪ್ರಮಾಣ ೩,೫೦೦ಕ್ಕೆ ಕುಸಿದಿದೆ. ಅಲ್ಲದೆ ಕೊರೊನಾ ಸೋಂಕು ನಿಧಾನವಾಗಿ ತನ್ನ ಅಬ್ಬರವನ್ನು ಕಳೆದುಕೊಳ್ಳುತ್ತಿದೆ ಎಂಬುದು ಡಬ್ಲ್ಯುಹೆಚ್‌ಒ ಹೇಳಿಕೆಯಿಂದ ಪುಷ್ಠಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಬ್ಲ್ಯುಹೆಚ್‌ಒ ಮುಖ್ಯಸ್ಥ ಟೆಡ್ರೊಸ್, ಕೋವಿಡ್ ಅಬ್ಬರ ಕಡಿಮೆಯಾಯಿತು ಎಂಬ ಮಾತ್ರಕ್ಕೆ ನಾವು ಈ ಹಿಂದೆ ರಚಿಸಿದ್ದ ಸೋಂಕಿನ ವಿರುದ್ಧದ ಎಲ್ಲಾ ರಕ್ಷಣಾ ಕ್ರಮಗಳನ್ನು ತೆಗೆದು ಹಾಕುವುದು ತಪ್ಪು ನಿರ್ಧಾರ. ಸೋಂಕು ಹೆಚ್ಚಿದರೆ ತುರ್ತುಪರಿಸ್ಥಿತಿ ಮರುಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ೨೦೨೦ರ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಸೋಂಕನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು.
ನಿನ್ನೆ ಡಬ್ಲ್ಯುಹೆಚ್‌ಒನ ತುರ್ತು ಸಮಿತಿಯು ೧೫ ನೇ ಬಾರಿಗೆ ಸಭೆ ಸೇರಿತ್ತು. ಈ ಸಭೆಯಲ್ಲಿ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಕೊನೆಗೊಳಿಸುವಂತೆ ನನಗೆ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ನಾನು ಆ ಸಲಹೆಯನ್ನು ಸ್ವೀಕರಿಸಿದ್ದೇನೆ. ಆದ್ದರಿಂದ ನಾನು ಕೋವಿಡ್-೧೯ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಂತ್ಯಗೊಂಡಿದೆ ಎಂದು ನಾನು ಘೋಷಿಸುತ್ತೇನೆ.
-ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಡಬ್ಲ್ಯುಹೆಚ್‌ಒ ಮುಖ್ಯಸ್ಥ