ಜಾಕ್ ಡಾರ್ಸಿ ಮೇಲೆ ಹಿಂಡೆನ್‌ಬರ್ಗ್ ವಕ್ರದೃಷ್ಟಿ!

ನ್ಯೂಯಾರ್ಕ್, ಮಾ.೨೪- ಭಾರತದ ಅದಾನಿ ಕಂಪೆನಿಯ ವಿರುದ್ಧ ಹಲವು ರೀತಿಯಲ್ಲಿ ವರದಿ ಪ್ರಕಟಿಸಿ, ಸಂಸ್ಥೆಗೆ ಭಾರೀ ನಷ್ಟ ಮಾಡಿದ್ದ ಹಿಂಡೆನ್‌ಬರ್ಗ್ ಇದೀಗ ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡಾರ್ಸಿ ಮೇಲೆ ವಕ್ರದೃಷ್ಟಿ ನೆಟ್ಟಿದೆ. ಡಾರ್ಸಿ ಅವರ ಮೊಬೈಲ್ ಪಾವತಿ ಸಂಸ್ಥೆ ಬ್ಲಾಕ್ ವಿರುದ್ಧ ಹಿಂಡೆನ್‌ಬರ್ಗ್ ಗಂಭೀರ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಒಂದೇ ದಿನ ಬರೊಬ್ಬರಿ ೫೨೬ ಮಿಲಿಯನ್ ಡಾಲರ್ (೪,೨೦೦ ಕೋ.ರೂ.) ನಷ್ಟ ಉಂಟಾಗಿದೆ.
ಕ್ಯಾಲಿಫೋರ್ನಿಯಾ ಮೂಲದ ಬ್ಲಾಕ್ ಸಂಸ್ಥೆಯು ತನ್ನ ಬಳಕೆದಾರರ ಸಂಖ್ಯೆಯನ್ನು ವ್ಯಾಪಕವಾಗಿ ಅತಿಯಾಗಿ ಹೇಳಿಕೊಂಡಿದೆ. ಅಲ್ಲದೆ ಇದರ ಹಲವು ಖಾತೆಗಳು ಮೋಸದಿಂದ ಕೂಡಿದೆ. ಈ ವಿಚಾರ ಸ್ವತಹ ಬ್ಲಾಕ್ ಸಂಸ್ಥೆಗೆ ತಿಳಿದಿದ್ದರೂ ಕೂಡ ಹಣಕಾಸಿನ ಬಹಿರಂಗಪಡಿಸುವಿಕೆಯಲ್ಲಿ ಇದನ್ನು ಲೆಕ್ಕ ಹಾಕಲು ವಿಫಲವಾಗಿದೆ ಎಂದು ಹಿಂಡೆನ್‌ಬರ್ಗ್ ವರದಿ ಮಾಡಿದೆ. ಇನ್ನು ಹಿಂಡೆನ್‌ಬರ್ಗ್ ವರದಿ ಹೊರಬರುತ್ತಲೇ ಬ್ಲಾಕ್ ಸಂಸ್ಥೆಯ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿಯಲು ಆರಂಭಿಸಿತು. ಗುರುವಾರ ಒಂದೇ ದಿನ ಬರೊಬ್ಬರಿ ೫೨೬ ಮಿಲಿಯನ್ ಡಾಲರ್ ನಷ್ಟ ಉಂಟಾಗಿದ್ದು, ಇದು ಮೇ ಬಳಿಕ ಡಾರ್ಸಿಗೆ ಅತೀ ದೊಡ್ಡ ಒಂದು ದಿನದಲ್ಲಿ ಆದ ನಷ್ಟವಾಗಿದೆ. ೧೧ ಪ್ರತಿಶತ ಷೇರು ಮೌಲ್ಯ ಕುಸಿತಗೊಂಡ ಬಳಿಕ ಸದ್ಯ ಡಾರ್ಸಿಯ ಆಸ್ತಿ ಮೌಲ್ಯ ೪.೪ ಶತಕೋಟಿ ಡಾಲರ್‌ಗೆ ಇಳಿದಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಕೆಲವಾರಗಳ ಹಿಂದೆ ಇದೇ ಹಿಂಡೆನ್‌ಬರ್ಗ್ ಸಂಸ್ಥೆಯು ಅದಾನಿ ಕಂಪೆನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು. ಇದರ ಪರಿಣಾಮ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ, ಹಿಂಡೆನ್‌ಬರ್ಗ್ ವರದಿಯ ಬಳಿಕ ಷೇರುಗಳ ಮೌಲ್ಯ ಕುಸಿತಗೊಂಡು ಸದ್ಯ ೨೧ನೇ ಸ್ಥಾನಕ್ಕೆ ಜಾರಿದ್ದಾರೆ.