ಜಾಕಿರ್ ಹುಸೇನ್ ಭಾವಚಿತ್ರ  ಚಿತ್ರಕಲಾ ಸ್ಪರ್ಧೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.30:  ಭಾರತೀಯ ಶಿಕ್ಷಣದ ಅಭಿವೃದ್ಧಿ ಹಾಗೂ ಸುಧಾರಣೆ ಕುರಿತು ಹಲವಾರು ಕೃತಿಗಳನ್ನು ಬರೆದು,ತಮ್ಮ ಬದುಕನ್ನೇ ಶಿಕ್ಷಣ ಕ್ಷೇತ್ರಕ್ಕೆ ಮುಡುಪಾಗಿಟ್ಟು,ಜೀವನದುದ್ದಕ್ಕೂ ಶಿಸ್ತು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದವರು ಡಾ.ಜಾಕಿರ್ ಹುಸೇನ್ ಅವರೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಅವರು ಇಂದು  ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತದ ಮೂರನೇ ರಾಷ್ಟ್ರಪತಿಗಳಾಗಿದ್ದ ಜಾಕಿರ್ ಹುಸೇನ್ ಅವರ ಭಾವಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಹುಸೇನ್ ಅವರು ಉತ್ತರ ಪ್ರದೇಶ ರಾಜ್ಯದ ಅಲಿಗಡವ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಸಿದರು.ಅಲ್ಲದೆ ದೆಹಲಿಯಲ್ಲಿ ಜಾಮಿಯಾ ಮಿಲಿಯ ವಿಶ್ವ ವಿದ್ಯಾಲಯ ಸ್ಥಾಪಿಸಿ, ಅದನ್ನು ಉನ್ನತ ಶಿಕ್ಷಣ ಕೇಂದ್ರ ವಾಗಿಸಿದರು.ಬಿಹಾರ ರಾಜ್ಯದ ರಾಜ್ಯಪಾಲರಾಗಿ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ ಎಂದು ಹೇಳುತ್ತಾ ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮೈಗೂಡಿಸಿಕೊಂಡು ಬಾಳಬೇಕೆಂದು ಹೇಳಿದರು.
ಎಂಟನೇ ತರಗತಿಯ ವಂಶಿ,ವೈಶಾಲಿ, ಕೀರ್ತಿ, ಪ್ರಜ್ವಲ್ ಹಾಗೂ ಏಳನೇ ತರಗತಿ ರಾಜಶೇಖರ್ ಬಹುಮಾನ ಪಡೆದರು.
ಶಿಕ್ಷಕರಾದ ಬಸವರಾಜ, ದಿಲ್ಷಾದ್ ಬೇಗಂ, ಚನ್ನಮ್ಮ, ಸುಮತಿ, ಸುಧಾ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಪುಷ್ಪ ನಮನ ಸಲ್ಲಿಸಿದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.