ಜಸ್ಟ್ ಪಾಸ್‍ನಲ್ಲಿ ಬೇಡರಕಣ್ಣಪ್ಪ ತೆಗೆಯಲು ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.14:- ಜಸ್ಟ್ ಪಾಸ್ ನಲ್ಲಿ ಹಾಸ್ಯದ ರೂಪದಲ್ಲಿ ಬಳಸಿರುವ ಬಳಸಿರುವ ದಿ.ಡಾ.ರಾಜ್ ಕುಮಾರ್ ಅವರ ನಟನೆಯ ಬೇಡರ ಕಣ್ಣಪ್ಪ ಹೆಸರನ್ನು ತೆಗೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣ ಸಮಿತಿ ಪ್ರತಿಭಟಿಸಿತು.
ನಗರದ ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆ ಎದುರು ಜಮಾವಣೆಗೊಂಡ ಸಮಿತಿಯ ಸದಸ್ಯರು ಜಸ್ಟ್ ಪಾಸ್ ಚಿತ್ರದ ನಟ, ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲ ಮಾತನಾಡಿ, ಬೇಡರ ಕಣ್ಣಪ್ಪ ಎಂಬ ಚಿತ್ರ ತುಂಬಾ ಅರ್ಥಪೂರ್ಣ ಹಾಗೂ ಅಭಿರುಚಿಯುಳ್ಳ ಚಿತ್ರವಾಗಿದೆ.
ಅಲ್ಲದೆ ಅಣ್ಣಾವ್ರ ಅಭಿನಯಕ್ಕೆ ಪ್ರಶಸ್ತಿ ಸಹ ಬಂದಿದೆ. ಅಂತಹ ಹೆಸರನ್ನು ಇವರ ಚಿತ್ರ ಕೀರ್ತಿ ಹೆಚ್ಚಿಸಿಕೊಳ್ಳಲು ಹಾಸ್ಯಾಸ್ಪದವಾಗಿ ಬಳಸಿರುವುದು ಖಂಡನೀಯ. ಇದು ಬೇಡರಕಣ್ಣಪ್ಪ ಚಿತ್ರ ಹಾಗೂ ಅಣ್ಣಾವ್ರ ಕುಟುಂಬಕ್ಕ ಎಸಗಿದ ಅಪಚಾರ ಆಗಲಿದೆ. ಈ ಕೂಡಲೇ ಸಂಬಂಧ ಪಟ್ಟವರು ಸದರಿ ಪದವನ್ನು ಚಿತ್ರದಿಂದ ತೆಗೆಯಬೇಕು. ಇಲ್ಲದಿದ್ದರೆ ನಾಳೆಯಿಂದರೆ ಜಸ್ಟ್ ಪಾಸ್ ಚಿತ್ರ ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಿ ಹೋರಾಟವನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಳೆ ಚಿತ್ರಗಳನ್ನು ಬಳಸಿಕೊಂಡು ತಮ್ಮ ಚಿತ್ರವನ್ನು ಹಿಟ್ ಮಾಡಿಕೊಳ್ಳುವ ಪದ್ಧತಿ ಶುರುವಾಗಿದೆ. ಅಂತೆಯೇ ಚಿತ್ರದಲ್ಲಿ ದೃಷ್ಟಿ ಚೇತನನೊಬ್ಬನನ್ನು ಅಸಹಾಯಕತೆಯನ್ನು ಮನರಂಜನೆಗಾಗಿ ಬಳಸಿಕೊಳ್ಳುವ ಜತೆಗೆ ಬೇಡರಕಣ್ಣಪ್ಪ ಹೆಸರಿಗೆ ಅಪಮಾನ ಮಾಡಿರುವುದು ನಮ್ಮ ಭಾವನೆಗೆ ಧಕ್ಕೆಯುಂಟು ಮಾಡಿದ್ದು, ಇದರ ವಿರುದ್ಧ ಹೋರಾಟ ನಿರಂತರವಾಗಿ ಇರಲಿದೆ ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಆರ್.ವಿನೋದ್ ಮಾತನಾಡಿ, ಯಾವ ಉದ್ದೇಶದಿಂದ ಹೀಗೆ ಪದ ಬಳಕೆ ಮಾಡಿದ್ದಾರೋ ತಿಳಿದಿಲ್ಲ. ಈಗ ಸದರಿ ಪದ ಬಳಸಿರುವ ಸನ್ನಿವೇಶ ನಮಗೆ ನೋವು ತರುತ್ತಿದೆ. ಈ ಕಾರಣಕ್ಕಾಗಿ ನಾವು ಪದವನ್ನು ಕೈ ಬಿಡಲಿ ಎಂದು ಆಗ್ರಹಿಸುತ್ತಿದ್ದೇವೆ. ನಮ್ಮ ಮನವಿಗೆ ನಿರ್ದೇಶಕ ಮತ್ತು ನಿರ್ಮಾಪಕರು ಸ್ಪಂದಿಸದಿದ್ದರೆ ಮುಂದೆ ಮತ್ತಷ್ಟು ಹೋರಾಟ ಮಾಡಲಾಗುವುದು ಎಂದರು.
ಸಮಿತಿಯ ಸುಭಾಷ್, ಭಾಗ್ಯಮ್ಮ, ಸುದರ್ಶನ್, ಪೂಜಾರಿ ಮಹದೇಶ್, ವನಜಾಕ್ಷಿ ಸೇರಿ ಅನೇಕರು ಉಪಸ್ಥಿತರಿದ್ದರು.