ಜವುಳಿ ವರ್ತಕರ ಬಗ್ಗೆ ಸರಕಾರದ ನಿರ್ಲಕ್ಷ್ಯ

ಮೂಡುಬಿದಿರೆ, ಜೂ.೬- ಅಸಂಘಟಿತ ವಲಯಕ್ಕೆ ಉದ್ಯೋಗಾವಕಾಶ ನೀಡಿದ ಜವುಳಿ ಉದ್ಯಮ ಲಾಕ್‌ಡೌನ್ ಹೊಡೆತದಿಂದ ತತ್ತರಿಸಿದೆ. ವರ್ಷದ ಮೂರು ತಿಂಗಳ ಸೀಸನ್ ಅವಧಿಯಲ್ಲೇ ಲಾಕ್‌ಡೌನ್ ಆಗಿರುವುದರಿಂದ ಜವುಳಿ ವರ್ತಕರು ನಷ್ಟವನ್ನು ಅನುಭವಿಸುವಂತ್ತಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಮರೆತು ಖರೀದಿ, ವ್ಯಾಪಾರ ಮಾಡುವವರ ಬಗ್ಗೆ ಕಾನೂನು ಕ್ರಮ ಬಿಗಿಯಾಗಬೇಕು. ಈಗಿನ ಸ್ಥಿತಿಯಲ್ಲಿ ಕೊರೋನಾ ನಿಯಂತ್ರಣ ಸಾಧ್ಯವಾಗದಿದ್ದರೆ ಜವುಳಿ ವ್ಯಾಪಾರಿಗಳಿಗೂ ವಾರದಲ್ಲಿ ಮೂರು ದಿನ ಅವಕಾಶ ನೀಡಬೇಕೆಂದು ಮೂಡುಬಿದಿರೆ ಜವುಳಿ ವರ್ತಕರ ಸಂಘವು ರಾಜ್ಯದ ಮುಖ್ಯಮಂತ್ರಿಯವರನ್ನು ಆಗ್ರಹಿಸಿದೆ.

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ಆರ್. ರವೀಂದ್ರ ಅವರು ಈ ಬಾರಿಯ ಲಾಕ್ ಡೌನ್ ಸಮಯದಲ್ಲಿ ಜವುಳಿ ವರ್ತಕರನ್ನು ಅಗತ್ಯ ಸೇವೆಯಿಂದ ಹೊರಗಿಟ್ಟ ಸರಕಾರ ಅತೀ ಹೆಚ್ಚು ಅಸಂಘಟಿತ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡಿದ ಜವುಳಿ ವರ್ತಕರನ್ನೇ ಮರೆತಿದೆ. ಕಾರ್ಮಿಕರಿಗೆ ಪ್ಯಾಕೇಜ್ ಕೂಡಾ ನೀಡಿಲ್ಲ.

  ಈಗಿರುವ ಪರಿಸ್ಥಿತಿಯಲ್ಲಿ ಜನ ಮಾಸ್ಕ್,ಅಂತರ ಮರೆದು ಖರೀದಿಗೆ ಮುಗಿಬೀಳುತ್ತಿದ್ದಾರೆ. ಆಗ ಶೇ ೫ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಬರಲು ಹಲವು ತಿಂಗಳೇ ಬೇಕಾಗಬಹುದು. ಮಾಸ್ಕ್, ಒಳ ಉಡುಪುಗಳು ಸೇರಿದಂತೆ ಅಗತ್ಯ ಉಡುಪುಗಳಿಗಾಗಿ ಜನ ಪರದಾಡುವ ಸ್ಥಿತಿ ಒಂದೆಡೆಯಾದರೆ ಇತರೆ ವ್ಯಾಪಾರಿಗಳೂ ಅಗತ್ಯ ಉಡುಪುಗಳನ್ನು ಜಿಲ್ಲೆಯ ಹಲವೆಡೆ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿದರು.

ಪ್ರತಿದಿನ ಅಗತ್ಯ ವಸ್ತುಗಳ ಖರೀದಿ ಏನು ಇರುತ್ತೆ? ಬೆಳಿಗ್ಗೆ ೬-೧೦ ರವರೆಗೆ ಪೇಟೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದರಿಂದಲೇ ಕೊರೋನಾ ಹೆಚ್ಚಾಗಲು ಕಾರಣವಾಗಿದೆ. ಸರಕಾರವು ಒಂದೋ ೧೫ ದಿನಗಳ ಕಾಲ ಫುಲ್ ಲಾಕ್‌ಡೌನ್ ಮಾಡಲಿ ನಾವು ಸಹಕಾರ ನೀಡುತ್ತೇವೆ ಆಗ ನೋಡೋಣ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತದೋ ಇಲ್ಲವೋ ಎಂದು. ಅಗತ್ಯವಸ್ತುಗಳ ಪಟ್ಟಿಯಲ್ಲಿ ಮಧ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ ಜಿ.ಎಸ್.ಟಿ ಆದಾಯದಲ್ಲಿ ಉನ್ನತ ಸ್ಥಾನದಲ್ಲಿರುವ ಜವುಳಿ ವ್ಯಾಪಾರಕ್ಕೆ ಅವಕಾಶ ಇಲ್ಲ. ಸರಕಾರ, ಜನಪ್ರತಿನಿಧಿಗಳು ಸೇರಿದಂತೆ ಜವಾಬ್ದಾರಿ ಸ್ಥಾನದಲ್ಲಿರುವವರು ಈ ಬಗ್ಗೆ ಸ್ಪಂದಿಸಬೇಕಿದೆ. ಜನತೆಯೂ ಸಹಕಾರ ನೀಡಬೇಕಿದೆ ಎಂದು ಅವರು ಹೇಳಿದರು.

  ಕಾರ್ಯದರ್ಶಿ ಸದಾಶಿವ ನೆಲ್ಲಿಮಾರ್, ಗೌರವಾಧ್ಯಕ್ಷ ಪ್ರಭಾತ್‌ಚಂದ್ರ ಜೈನ್, ಪದಾಧಿಕಾರಿಗಳಾದ ಗೋವಿಂದ ಪ್ರಜಾಪತಿ, ಅನ್ವರ್ ಉಪಸ್ಥಿತರಿದ್ದರು.