ಜವಾಬ್ದಾರಿಯುತ ಡಾಕ್ಟರೇಟ್ ಆಗಿದೆ: ಎಸ್ ಕೃಪಾ ಶಂಕರ್

ವಿಜಯಪುರ.ಏ೨೪: ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ವತಿಯಿಂದ ನೀಡಲಾಗಿರುವ ಗೌರವ ಡಾಕ್ಟರೇಟ್ ಬಗ್ಗೆ ಮಾತನಾಡಿದ ಡಾ. ಎಸ್ ಕೃಪಾಶಂಕರ್ ರವರು ಇದನ್ನು ಗೌರವಯುತ ಡಾಕ್ಟರೇಟ್ ಅನ್ನುವುದಕ್ಕಿಂತ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸುವ ಜವಾಬ್ದಾರಿಯುತ ಡಾಕ್ಟರೇಟ್ ಎಂದು ತಿಳಿದುಕೊಳ್ಳಬೇಕಿದೆ ಎಂದು ಪ್ರಗತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಕೃಪಾಶಂಕರ್ ತಿಳಿಸಿದರು.
ಅವರು ಇಲ್ಲಿನ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಸೋಮವಾರದಂದು ಯುವ ಚೇತನ-ಯುವಜನ ಕೇಂದ್ರ, ನೆಹರು ಯುವ ಕೇಂದ್ರ ಸಂಘಟನೆಗಳ ವತಿಯಿಂದ ಏರ್ಪಡಿಸಲಾಗಿದ್ದ “ವಿಶ್ವ ಅರಣ್ಯ ಸಂರಕ್ಷಣಾ ದಿನಾಚರಣೆ ಹಾಗೂ ಕಾಡಿನ ಬೆಂಕಿ ತಡೆಗಟ್ಟುವ ಆಂದೋಲನ ೨೦೨೪” ಹಾಗೂ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿಯಿಂದ ನೀಡಿದ ಡಾಕ್ಟರೇಟ್ ಬಗ್ಗೆ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಯುವಚೇತನ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ನಮ್ಮ ಕ್ಯಾಂಪಸ್ ನಲ್ಲಿ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳುವುದರೊಂದಿಗೆ ಅಂತರ್ಜಲ ವೃದ್ಧಿಸುವ ಕಾರ್ಯಕ್ರಮ ಹಾಗೂ ತ್ಯಾಜ್ಯ ನೀರನ್ನು ಗಿಡಗಳ ಬೆಳವಣಿಗೆಗೆ ಬಳಸಲಾಗುತ್ತಿದೆ ಎಂದು ಇಂತಹ ೧೦ ಹಲವಾರು ಕಾರ್ಯಕ್ರಮಗಳನ್ನು ಪ್ರಗತಿ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿದ್ದು, ಅದಕ್ಕಾಗಿ ತಮ್ಮನ್ನು ಗುರುತಿಸಿ ಗ್ಲೋಬಲ್ ಹ್ಯೂಮನ್ ಪೀಸ್ ಯುನಿವರ್ಸಿಟಿ ರವರು ನೀಡಿರುವ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ನಮ್ಮ ಶಿಕ್ಷಣ ಸಂಸ್ಥೆಗಳ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಿಗೂ ವಿದ್ಯಾರ್ಥಿಗಳಿಗೂ ಅರ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ನಿಂದ ಆಗುತ್ತಿರುವ ಅನಾಹುತ ವಿಪರೀತವಾಗುತ್ತಿರುವ ಈ ಸಂದರ್ಭದಲ್ಲಿ ಪ್ರಗತಿ ಪ್ರಥಮ ದರ್ಜೆ ಕಾಲೇಜು, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು,ಐಟಿಐ ಕಾಲೇಜು ಎಲ್ಲೆಡೆ ಸಂಪೂರ್ಣ ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕ್ಯಾಂಪಸ್ ಅನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ರಾಜ್ಯ ಯುವ ಚೇತನ ಯೋಜನೆ ಕೇಂದ್ರದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ನಂದಿದುರ್ಗ ಬಾಲುಗೌಡರವರು ಮಾತನಾಡಿ ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ನಡೆಸಿಕೊಂಡು ಹೋಗುತ್ತಿದ್ದರೆ ಪದವಿ ಅಧಿಕಾರಗಳು ತನ್ನಂತಾನೆ ಒಲಿದು ಬರುತ್ತವೆ ಎಂದು ಅದಕ್ಕಾಗಿ ನಾವು ಏನನ್ನು ಮಾಡಬೇಕಾಗಿಲ್ಲವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಂ ಸತೀಶ್ ಕುಮಾರ್, ರಾಜ್ಯ ಯೋಜನಾ ಯುವ ಚೇತನ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಾನಸ, ಕಾಡಿನ ಮಿತ್ರ ಬಿಂದು, ಮೇಲೂರು ನಾರಾಯಣಸ್ವಾಮಿ ಹಾಗೂ ಪ್ರಗತಿ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು ಪ್ರಾಂಶುಪಾಲರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.