ಜವಾಬ್ದಾರಿಯುತವಾಗಿ ಮಳೆ ಹಾನಿಯ ಸಮೀಕ್ಷೆ ನಡೆಸಿ: ಸಚಿವ ಪ್ರಭು ಚವ್ಹಾಣ

ಔರಾದ :ಜು.26: ಅತಿವೃಷ್ಠಿಯಿಂದಾಗಿ ಔರಾದ ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ಉಂಟಾಗಿರುವ ರಸ್ತೆ, ಸೇತುವೆ, ಶಾಲೆ-ಕಾಲೇಜುಗಳು, ಅಂಗನವಾಡಿ ಕಟ್ಟಡಗಳ ಹಾನಿ ಸೇರಿದಂತೆ ಹಾನಿಯ ಬಗ್ಗೆ ಇಲಾಖಾವಾರು ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕೆಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಔರಾದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜುಲೈ 25ರಂದು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು ನಾನು ಔರಾದ ಹಾಗೂ ಕಮಲನಗರ ತಾಲೂಕುಗಳ ಹಲವು ಗ್ರಾಮಗಳಲ್ಲಿ ಸಂಚರಿಸಿ ಹಾನಿಯ ಬಗ್ಗೆ ಕಣ್ಣಾರೆ ವೀಕ್ಷಿಸಿದ್ದೇನೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಧಿಕಾರಿಗಳು ಸಲ್ಲಿಸುವ ವರದಿಯನ್ನು ಆಧರಿಸಿ ಅತಿವೃಷ್ಟಿ ಪ್ರದೇಶವೆಂದು ಘೋಷಿಸುವುದರಿಂದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಚ್ಚುಕಟ್ಟಾಗಿ ಹಾನಿಯ ಸಮೀಕ್ಷೆ ಮಾಡಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ತಿಳಿಸಿದರು.

ಅನೇಕ ಕಡೆಗಳಲ್ಲಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ಇದು ಒಳ್ಳೆಯ ಸಂಕೇತವಲ್ಲ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಬೆಳೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ರೈತರಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಔರಾದ ಮತ್ತು ಕಮಲನಗರ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ನದಿ ಮತ್ತು ಹಳ್ಳದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಸೋಯಾ ಅವರೆಗಿಂತ ಹೆಸರು, ಉದ್ದು, ತೊಗರಿ ಹೆಚ್ಚಿನ ಹಾನಿಯಾಗಿದೆ. ಕ್ಷೇತ್ರದಲ್ಲಿ 605 ಹೆಕ್ಟೇರ್ ಪ್ರದೇಶ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದ್ದು, ಮಳೆ ನಿಂತ ನಂತರ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಎ.ಕೆ ಅನ್ಸಾರಿ ಅವರು ಸಭೆಗೆ ಮಾಹಿತಿ ನೀಡಿದರು.

ಬಸವನ ಹುಳು ಕಾಟದಿಂದ ಬೆಳೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಔರಾದ ಮತ್ತು ಕಮಲನಗರ ತಾಲ್ಲೂಕುಗಳ 70 ಹಳ್ಳಿಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಾಲಕಾಲಕ್ಕೆ ಬೆಳೆಗಳಿಗೆ ಅವಶ್ಯಕತೆಯಿರುವ ಔಷಧಿ ಲಭ್ಯವಾಗಿರುವಂತೆ ನೋಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದಾರೆ. ಬೆಳೆ ಹಾನಿಯಾದ ರೈತರೆಲ್ಲರಿಗೂ ಬೆಳೆವಿಮೆ ಪರಿಹಾರ ಸಿಗುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಯಾವೊಬ್ಬ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಅಧಿಕಾರಿಗಳಿಂದ ಮನೆ ಹಾನಿಯ ಬಗ್ಗೆ ವಿವರಣೆ ಪಡೆದ ಸಚಿವರು, ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಎಲ್ಲ ಸಂತ್ರಸ್ಥರಿಗೆ ಪರಿಹಾರಧನ ನೀಡಲಾಗಿದೆ. ಇನ್ನೂ ಬಾಕಿ ಇರುವ ಎಲ್ಲಾ ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಕೊಡಲಾಗುತ್ತಿರುವ ಪರಿಹಾರದ ಮೊತ್ತವನ್ನು ತುರ್ತಾಗಿ ಕೊಡುವ ಕೆಲಸ ಮಾಡಬೇಕೆಂದು ಔರಾದ ಮತ್ತು ಕಮಲನಗರ ತಹಸೀಲ್ದಾರರಿಗೆ ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಯಾದ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ಬಗ್ಗೆ ವಿವರಣೆ ಪಡೆದ ಸಚಿವರು, ಎಲ್ಲ ಶಾಲೆಗಳಿಗೆ ಆಟದ ಮೈದಾನ ಮತ್ತು ಕಾಂಪೌಂಡ್ ಗೋಡೆ ನಿರ್ಮಿಸಿಕೊಡುವ ಉದ್ದೇಶವಿದ್ದು, ಅವಶ್ಯಕತೆಯಿರುವ ಶಾಲೆ ಮತ್ತು ಅಂಗನವಾಡಿಗಳ ಪಟ್ಟಿ ನೀಡುವಂತೆ ತಾಕೀತು ಮಾಡಿದರು. ಅಲ್ಲದೆ ಎಂಜಿ ನರೇಗಾ ಯೋಜನೆಯಡಿ ಕಟ್ಟಿಸಿಕೊಡಲು ಕ್ರಮ ವಹಿಸುವಂತೆ ತಾಪಂ ಅಧಿಕಾರಿಗಳಿಗೆ ತಿಳಿಸಿದರು.

ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಮಳೆಗಾಲ ಅಂತ್ಯದವರೆಗೆ ಔರಾದ ಮತ್ತು ಕಮಲನಗರ ತಾಲ್ಲೂಕಿನ ಎಲ್ಲ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಸಸಿಗಳನ್ನು ನೆಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜೆಸ್ಕಾಂ, ತೋಟಗಾರಿಕೆ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ, ಪಶುಸಂಗೋಪನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸ್ವಚ್ಛತೆಯ ಕಡೆ ಕಡೆ ಗಮನ ಕೊಡಿ: ಸಾಕಷ್ಟು ಮಳೆಯಾಗಿದ್ದರಿಂದ ಗ್ರಾಮಗಳಲ್ಲಿ ನೀರು ನಿಂತು ಮಲೇರಿಯಾ, ಡೆಂಗ್ಯೂ ಸೇರಿದಂತೆ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕು. ಚರಂಡಿಗಳನ್ನು ಶುಚಿಗೊಳಿಸಬೇಕು. ಎಲ್ಲಾ ಕಡೆ ಫಾಗಿಂಗ್ ಮಾಡಿಸಬೇಕು. ಈ ದಿಶೆಯಲ್ಲಿ ಎಲ್ಲ ಪಿಡಿಒಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ತಾಲೂಕು ಪಂಚಾಯತ್ ಇಓಗಳಿಗೆ ಸಚಿವರು ಸೂಚಿಸಿದರು.

ಕಮಲನಗರ ತಹಸೀಲ್ದಾರ ರಮೇಶ್ ಪೆದ್ದೆ, ಔರಾದ ತಾಲೂಕು ಪಂಚಾಯತ್ ಇಓ ಬಿರೇಂದ್ರ ಸಿಂಗ್ ಠಾಕೂರ್, ಕಮಲನಗರ ಇಓ ಸೈಯದ್ ಫಜಲ್ ಮಹಮೂದ್, ಗ್ರೇಡ್-2 ತಹಸೀಲ್ದಾರ ಮಾಶೆಟ್ಟಿ ಚಿದ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.