ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಸಚಿವ ಡಾ.ಎಂ.ಬಿ.ಪಾಟೀಲ

(ಸಂಜೆವಾಣಿ ವಾರ್ತೆ)
ವಿಜಯಪುರ: ಜು.27:ಎಲ್ಲ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜರುಗಿದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಕುಡಿಯುವ ನೀರಿನ ಕಾರ್ಯಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಕಾರ್ಯನಿರ್ವಹಿಸಬೇಕು. ಯಾವುದೇ ಸಮಸ್ಯೆ ಎದುರಾದಲ್ಲಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ಹಂತದಲ್ಲಿ ಸಾಧ್ಯವಾಗದೇ ಇದ್ದಾಗ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕೈಗೊಂಡು ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಳೆ ಉತ್ತಮವಾಗಿ ಆಗುವುದರಿಂದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳೊಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕ ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸರ್ಕಾರದ ಮಟ್ಟದಲ್ಲಿ ಇತ್ಯರ್ಥಗೊಳಿಸಲಾಗುವುದು ಒಟ್ಟಾರೆ ಜಿಲ್ಲೆಯ ಜನತೆಯ ಆಶೋತ್ತರಗಳಿಗನುಗುಣವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಈಗಾಗಲೇ ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯ 20 ಗ್ರಾಮ ಪಂಚಾಯತಿಯ 29 ಗ್ರಾಮಮಗಲ್ಲಿ 38 ಟ್ಯಾಂಕರ್ ಮೂಲಕ ಪ್ರತಿ ದಿನ 90 ಟ್ರಿಪ್ ಮೂಲಕ ಹಾಗೂ ಖಾಸಗಿ 17 ಕೊಳವೆ ಬಾವಿ ನೀರು ಪೂರೈಕೆಯಾಗುತ್ತಿದ್ದು, ಜಿಲ್ಲೆಯ ಇಂಡಿ, ಚಡಚಣ, ತಿಕೋಟಾ, ಸಿಂದಗಿ, ಆಲಮೇಲ ವಿಜಯಪುರ ತಾಳಿಕೋಟೆ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಸುವ ಕಾರ್ಯ ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಆರ್.ಡಿ.ಪಿ.ಆರ್. ಇಲಾಖೆಯಿದ ಸಹಾಯಧನ ಒದಗಿಸಲು ವ್ಯವಸ್ಥೆ ಮಾಡುವಂತೆ ಅವರು ಸೂಚಿಸಿದ ಅವರು, 3 ಲಕ್ಷ್ ಕ್ಯೂಸೆಕ್ಸ್‍ಗೂ ಹೆಚ್ಚಿನ ಪ್ರಮಾಣದ ನೀರು ಹರಿದರೆ ಮಾತ್ರ ಪ್ರವಾಹ ಪರಿಸ್ಥಿತಿ ಎದುರಾಗಲಿರುವುದರಿಂದ ಪ್ರವಾಹಕ್ಕೊಳಗಾಗುವ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಕನಾಳ-ಟಕ್ಕಳಕಿ ಕೆರೆ ತುಂಬಿಸುವ ಕಾರ್ಯ ಪೂರ್ಣಗೊಳಿಸಬೇಕು. 1.4 ಕಿ.ಮೀ. ಪೈಪ್ ಲೈನ್ ಕಾಮಗಾರಿ ಬಾಕಿ ಉಳಿದಿದ್ದು, 3 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಬೇಕು. ಯಂಕಂಚಿ- ಪುರದಾಳ ಕೆರೆ ತುಂಬಿಸುವ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿನ ಓವರ್ ಟ್ಯಾಂಕ್‍ಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಬೇಕು. ಬಾಗೇವಾಡಿಯಿಂದ ಹಂಗರಗಿ ಲಿಂಕ್ ಕಾಮಗಾರಿ ಬೇಗ ನಿರ್ವಹಿಸಬೇಕು. ಹೂವಿನಹಿಪ್ಪರಗಿಯ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದ ಅವರು, ಯಾವುದೇ ಕುಡಿಯುವ ನೀರಿನ ಯೋಜನೆ ದೀರ್ಘಾವಧಿ ಯೋಜನೆಯಾಗಿರಬೇಕು. ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಿಂದ ಕಾರ್ಯನಿಹಿಸಬೇಕು ಎಂದು ಹೇಳಿದರು.
ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ವಿಜಯಪುರ ಜಿಲ್ಲೆಯ ಚಿಮ್ಮಲಗಿ ಪಶ್ಚಿಮ ಕಾಲುವೆ ಮೂಲಕ ಕೆರೆಗಳನ್ನು ತುಂಬಲು 0.304 ಟಿಎಂಸಿ ಒಳಗೊಂಡಂತೆ, ಎಲ್ಲಾ ಯೋಜನೆಗಳ ಕಾಲುವೆಗಳ ಮೂಲಕ ಕೆರೆಗಳನ್ನು ಹಾಗೂ ಸ್ಥಾವರ ಮೂಲಕ ಕೆರೆಗಳನ್ನು ತುಂಬಿಸಲು 2.50 ಟಿ.ಎಂ.ಸಿ. ನೀರನ್ನು ಹಾಗೂ ನಾರಾಯಣಪುರ ಜಲಾಶಯಕ್ಕೆ ಎಂ.ಡಿ.ಎಲ್. ಮಟ್ಟಕ್ಕೆ ನೀರು ಭರ್ತಿಯಾದ ನಂತರ 0.925 ಟಿಎಂಸಿ ನೀರನ್ನು ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಇಂಡಿ ಶಾಖಾ ಕಾಲುವೆ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ಗ್ರಾಮೀಣ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಯ ಸಂಗ್ರಹಾಲಯಗಳಿಗೆ 2 ಟಿಎಂಸಿ ನೀರು ಸೇರಿದಂತೆ 4.5 ಟಿಎಂಸಿ ನೀರು ಆಲಮಟ್ಟಿ ಜಲಾಶಯದಿಂದ ಉಪಯೋಗಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುತಿಸಿರುವುದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕೆರೆ ತುಂಬುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ೂನ್ ಮತ್ತು ಜುಲೈ ತಿಂಗಳಲ್ಲಿ 10 ಜಾನುವಾರು ಜೀವ ಹಾನಿಯಾಗಿದ್ದು, ಪರಿಹಾರ ವಿತರಿಸಲಾಗಿದೆ. ಸಂಪೂರ್ಣ ಹಾಗೂ ತೀವ್ರ ಯಾವುದೇ ಮನೆ ಹಾನಿಯಾಗಿಲ್ಲ. ಭಾಗಶಃ ಶೇ.15 ರಷ್ಟು ಹಾನಿಯಾಗಿರುವ 45 ಮನೆಗಳು ಮತ್ತು 6 ಗುಡಿಸಲು ಸೇರಿದಂತೆ 51 ಮನೆ ಹಾನಿಗೆ ಸಂಬಂಧಿಸಿದಂತೆ 21 ಮನೆಗಳಿಗೆÉ ಪರಿಹಾರ ವಿತರಿಸಲಾಗಿದೆ. ಉಳಿದ ಮನೆಗಳ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಕನ್ನೂರ ಗ್ರಾಮದಲ್ಲಿ ಮಳೆಯಿಂದಾಗಿ ಜೀವಹಾನಿಯಾದ ಮೃತರ ಕುಟುಂಬಕ್ಕೆ ಘಟನೆಯಾದ 12 ಗಂಟೆಯೊಳಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಮುಂದಿನ ದಿನಗಳಲ್ಲಿ ಮಳೆ ಜಾಸ್ತಿಯಾಗುವ ಸಂಭವವಿರುವುದರಿಂದ ಈಗಾಗಲೇ ಪ್ರವಾಹಕ್ಕೊಳಗಾಗುವ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಕುರಿತು ಜಿಲ್ಲಾ ಹಾಗೂ ತಾಲೂಕಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆಗಳನ್ನು ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾಹಿತಿ ನೀಡಿದರು.
ಜುಲೈ 19ರಿಂದ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಶೇ.38 ರಷ್ಟು ಬಿತ್ತನೆಯಾಗಿದೆ. 2.78 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಇದರಲ್ಲಿ ಪ್ರಮುಖವಾಗಿ 1.50 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಬಿತ್ತಲಾಗಿದೆ. ಕಳೆದ ವರ್ಷ 4 ಲಕ್ಷ ಹೆಕ್ಟೇರ್ ತೊಗರಿ ಬಿತ್ತೆನಯಾಗಿದ್ದು. ಪ್ರಸಕ್ತ ಆಗಸ್ಟ್‍ವರೆಗೆ ತೊಗರಿ ಬಿತ್ತನೆಗೆ ಅವಕಾಶವಿದೆ. ಉಳ್ಳಾಗಡ್ಡಿ ಬೀಜ ವಿತರಣೆಯಿಂದ ರೈತರಿಗೆ ಅನುಕೂಲವಾಗುವುದರಿಂದ ಸರ್ಕಾರ ಮಟ್ಟದಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ರಸಗೊಬ್ಬರದ ಯಾವುದೇ ಕೊರತೆಯಿಲ್ಲ. 70 ಸಾವಿರ ಮೆಟ್ರಿಕ್ ಟನ್ ದಾಸ್ತಾನಿದೆ. ಇನ್ನೂ 2 ಸಾವಿರ ಮೆಟ್ರಿಕ್‍ಟನ್ ಪೂರೈಕೆಯಾಗಲಿದೆ. ಪ್ರತಿ ವಾರ 19,134 ಮೆಟ್ರಿಕ್ ಟನ್ ಅಗತ್ಯವಿದ್ದು, 30 ವಾರಗಳ ಕಾಲವರೆಗಿನ ಮೇವು ದಾಸ್ತಾನಿದೆ. ಮೇವು ರಸಗೊಬ್ಬರದ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸೂಚಿಸಲಾಯಿತು.
ವಿಜಯಪುರದ ಐತಿಹಾಸಿಕ ಬಾವಿಗಳ ನೀರು ಉಪಯೋಗ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕು. ಕೊಳವೆ ಬಾವಿ ನೀರಿನ ಮಟ್ಟ ಹೆಚ್ಚಾದಲ್ಲಿ ಮೊಟರ್ ಅಳವಡಿಸಿ ಪೈಪಲೈನ್ ಮೂಲಕ ನೀರು ಪೂರೈಸಲು ಕ್ರಮ ವಹಿಸಬೇಕು. ಒಟ್ಟಾರೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಕುಡಿಯುವ ನೀರಿನ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.