ಜವಳಿ ಪಾರ್ಕ್ ಘೋಷಣೆ ಬಾಬುರಾವ್ ಮನವಿ

ರಾಯಚೂರು,ಜ.೧೮- ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ಜವಳಿ ಪಾರ್ಕ್ ಘೋಷಣೆ ಮಾಡಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಅವರು ಪತ್ರಿಕಾ ಹೇಳಿಕೆ ಮುಖಾಂತರ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು.
ಜ.೧೯ ರಂದು ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ಜವಳಿ ಪಾರ್ಕ್ ಘೋಷಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಆಗಿದ್ದು, ಹಾಗೂ ಆರ್ಟಿಕಲ್ ೩೭೧ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದಿವೆ. ಎರಡು ಜಿಲ್ಲೆಗಳು ಮಹತ್ವಾಕಾಂಕ್ಷೆ ಜಿಲ್ಲೆಗಳೆಂದು ಸಹ ಆಯ್ಕೆಯಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಕಾಟನ್ ಮಾರ್ಕೆಟ್ ಹೊಂದಿದ್ದು, ಪ್ರತಿ ವರ್ಷ೧೧೦ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯಿಂದ ಸುಮಾರು ೨೫ ಲಕ್ಷ ಕಾಟನ್ ಬೇಲ್ಸ್ ಅಂದಾಜು ರೂ.೧೦, ಸಾವಿರ ಕೋಟಿ ವ್ಯವಹಾರವಿರುತ್ತದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇದಕ್ಕಾಗಿ ಅಗತ್ಯ ಭೂಮಿ ಹಾಗೂ ವಿದ್ಯುತ್ ಹಾಗೂ ನೀರು ಪಕ್ಕದ ಕೃಷ್ಣ ಮತ್ತು ತುಂಗಭದ್ರಾ ನದಿಗಳಿಂದ ದೊರೆಯಲಿದೆ. ಮೇಘ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣದಿಂದ ಸುಮಾರು ೧ ಲಕ್ಷ ಜನರಿಗೆ ನೇರವಾಗಿ ೭೫ ಸಾವಿರ ಜನರಿಗೆ ಪರೋಕ್ಷವಾಗಿ ೨೫ ಸಾವಿರ ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದರು.
ಈ ವಿಭಾಗದ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಯಾದಗಿರಿ ಕೊಪ್ಪಳ ಬಳ್ಳಾರಿ, ಬೀದರ್, ಗುಲ್ಬರ್ಗ ಜಿಲ್ಲೆಗಳ ಯುವಕರಿಗೆ ಉದ್ಯೋಗಾವಕಾಶವೂ ಸಿಗಲಿವೆ. ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೇಘ ಟೆಕ್ಸ್‌ಟೈಲ್ ಪಾರ್ಕ್ ಘೋಷಣೆ ಮಾಡಿ ಈ ಭಾಗದ ಜನರಿಗೆ ಸಿಹಿ ಸುದ್ದಿಯನ್ನು ನೀಡಿ ಹಿಂದುಳಿದ ಜಿಲ್ಲೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಬಾಬುರಾವ್ ಮನವಿ ಮಾಡಿದರು.