ಜವಬ್ದಾರಿಯಿಂದ ವಾಹನ ಚಾಲನೆ ಮಾಡಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ: ಜ.31;- ವಾಹನ ಚಾಲಕರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸದರೆ ಅಪಘಾತ ರಹಿತ ಸಂಚಾರ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ಅವರು ಪಟ್ಟಣದ ಶಿಕ್ಷಕರ ಭವನದ ಸಭಾಂಗಣದಲ್ಲಿ ನಾಗಮಂಗಲ ಸಹಾಯಕ ಸಾರಿಗೆ ಅಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ತಾಲೂಕಿನ ವಿವಿಧ ಶಾಲೆಗಳ ಶಾಲಾ ವಾಹನಗಳ ಚಾಲಕರಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ವಾಹನಗಳ ಚಾಲಕರಿಗೆ ಮತ್ತು ಸಹಾಯಕರಿಗೆ ಸಂಚಾರಿ ನಿಯಮಗಳು ಮತ್ತು ಕರ್ತವ್ಯ ಪಾಲನೆಯ ನಿಯಮಗಳ ಬಗ್ಗೆ ಅರಿವು ಮೂಡಿಸಿದರೆ ಶಾಲಾ ಮಕ್ಕಳ ಅಮೂಲ್ಯ ಜೀವ ಹಾನಿಯಾಗುವುದನ್ನು ತಪ್ಪಿಸಬಹುದು. ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು. ಯಾವ ಮಕ್ಕಳಲ್ಲಿ ಯಾವ ರೀತಿಯ ಸುಪ್ತ ಪ್ರತಿಭೆ ಇದೆಯೂ ನಮಗೆ ಗೊತ್ತಿಲ್ಲ. ಅಮೂಲ್ಯ ಜೀವಗಳು ಅರಳುವ ಮುನ್ನವೇ ಅಪಘಾತಗಳಿಗೆ ಬಲಿಯಾಗಬಾರದು ಎನ್ನುವ ಕಾರಣದಿಂದ ನಮ್ಮ ಆರ್.ಟಿ.ಓ ಇಲಾಖೆಯ ವತಿಯಿಂದ ವಿಶೇಷವಾಗಿ ಸಂಚಾರಿ ನಿಯಮಗಳ ಅರಿವು ಮತ್ತು ಪಾಲನೆ ಹಾಗೂ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದ ಮಲ್ಲಿಕಾರ್ಜುನ್ ವಾಹನ ಚಾಲಕರು ಮದ್ಯಪಾನ ಮತ್ತು ದುಶ್ಚಟಗಳಿಂದ ದೂರವಿರಬೇಕು. ವಾಹನಕ್ಕೆ ಮಕ್ಕಳನ್ನು ಹತ್ತಿಸಿಕೊಳ್ಳುವಾಗ ಮತ್ತು ಇಳಿಸಿಕೊಳ್ಳುವಾಗ ಮಕ್ಕಳ ಸುರಕ್ಷತೆಯ ಕಡೆ ಗಮನ ಹರಿಸಬೇಕು. ವಾಹನ ಚಾಲಕರಿಗೂ ಒಂದು ಕುಟುಂಬವಿದೆ. ಮಕ್ಕಳ ಸುರಕ್ಷತೆಯ ಜೊತೆಗೆ ನಿಮ್ಮ ಜೀವದ ಸುರಕ್ಷತೆಯ ಕಡೆಗೂ ಗಮನ ನೀಡಿ ಎಂದು ಕಿವಿ ಮಾತು ಹೇಳಿದ ಮಲ್ಲಿಕಾರ್ಜುನ್ ವಾಹನಗಳ ಸುಸ್ಥಿಯ ಬಗ್ಗೆಯೂ ಚಾಲಕರು ನಿತ್ಯ ಗಮಿನಿಸಬೇಕೆಂದರು. ಅಪಘಾತ ರಹಿತ ವಾಹನ ಚಾಲಕರು ಸುಸ್ಥಿರ ಸಮಾಜದ ಅಮೂಲ್ಯ ಆಸ್ತಿ ಎಂದರು.
ವಾಹನಗಳ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತ ಮುಕ್ತವಾಗಿ ವಾಹನಗಳನ್ನು ಚಾಲನೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಾಗಮಂಗಲ ಪ್ರಾದೇಶಿಕ ಸಾರಿಗೆ ಕಛೇರಿಯ ಅಧೀಕ್ಷಕರಾದ ಸತೀಶ್, ಪತ್ರಕರ್ತರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್. ನೀಲಕಂಠ, ಸೇರಿದಂತೆ ನೂರಾರು ವಾಹನ ಚಾಲಕರು ಉಪಸ್ಥಿತರಿದ್ದರು.