ಜಲ ಶಕ್ತಿ ಅಭಿಯಾನ ಕುರಿತ ಪ್ರಗತಿ ಪರಿಶೀಲನಾ ಸಭೆ

ವಿಜಯಪುರ:ಎ.26: ಜಲ ಶಕ್ತಿ ಅಭಿಯಾನದಡಿ ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳ ಪುನಃಶ್ಚೇತನ, ನೀರಿನ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಪ್ರದೇಶ ಅಭಿವೃದ್ಧಿ & ಅರಣ್ಯೀಕರಣ ಕಾಮಗಾರಿಗಳಿಗೆ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಜಲ ಶಕ್ತಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮುಖ್ಯವಾಗಿ ಮಳೆ ನೀರು ಸಂರಕ್ಷಣೆಗಾಗಿ ಬೋರವೆಲ್ ಇಂಗುಗುಂಡಿ, ಚೆಕ್ ಡ್ಯಾಂ ನಿರ್ಮಾಣ, ಸಮಗ್ರ ಕೆರೆ ಅಭಿವೃದ್ಧಿ, ಗೋಕಟ್ಟೆ/ಕಲ್ಯಾಣಿ ಪುನಃಶ್ಚೇತನ, ಬದು ಮತ್ತು ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವುದು. ಸ್ಥಳಾವಕಾಶವಿರುವ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲಿ ಸಸಿಗಳನ್ನು ನೆಡುವುದು, ಅಮೃತ ಸರೋವರದ ಆವರಣದಲ್ಲಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸರಕಾರಿ ಸ್ಥಳಗಳಲ್ಲಿ ಸಸಿಗಳನ್ನು ನೆಡಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಕಲ್ಯಾಣಿ, ಕೆರೆ-ಕಟ್ಟೆಯಂತಹ ವಿವಿಧ ಜಲ ಮೂಲಗಳನ್ನು ಸ್ವಚ್ಛವಾಗಿಡಬೇಕು.
ಕುಡಿಯಲು ಬಳಸುವ ಜಲ ಮೂಲಗಳನ್ನು ಮೇಲಿಂದ ಮೇಲೆ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕು ಈಗಾಗಲೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವ-ಸಹಾಯ ಸಂಘದ ಮೂಲಕ ಅಮೃತ ನರ್ಸರಿಗಳನ್ನು ಪ್ರಾರಂಭ ಮಾಡಲಾಗಿದ್ದು, ಸದರಿ ನರ್ಸರಿಗಳಲ್ಲಿ ಬೆಳೆದ ಸಸಿಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಯವರು ನಿಯಮಾನುಸಾರ ಖರೀದಿಸಿ, ಸರ್ಕಾರಿ ಶಾಲೆಗಳಲ್ಲಿ ಪೌಷ್ಠಿಕ ತೋಟ ನಿರ್ಮಾಣದಂತಹ ಕಾಮಗಾರಿಗಳಿಗೆ ಕಡ್ಡಾಯವಾಗಿ ಬಳಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.