ಜಲ ದುರಂತ: ೧೩ ಮಂದಿ ಸಾವು

ಪಾಟ್ನಾ,ನ.೨೧- ಬಿಹಾರದ ಏಳು ಜಿಲ್ಲೆಗಳಲ್ಲಿ ಕಳೆದ ೨೪ ಗಂಟೆಗಳಲ್ಲಿ ಛತ್ ಪೂಜೆಯ ವೇಳೆ ವಿವಿಧ ನದಿಗಳು ಮತ್ತು ಇತರ ಜಲಾಶಯಗಳಲ್ಲಿ ಮುಳುಗಿ ೧೩ ಜನರು ಸಾವನ್ನಪ್ಪಿದ್ದಾರೆ. ಈ ಘಟನೆಗಳು ನವೆಂಬರ್ ೧೯ ಮತ್ತು ೨೦ ರಂದು ಸಂಜೆ ಮತ್ತು ಬೆಳಿಗ್ಗೆ ಅರ್ಘ್ಯದ ಸಮಯದಲ್ಲಿ ಛತ್ ಹಬ್ಬದ ಸಮಯದಲ್ಲಿ ಸಂಭವಿಸಿವೆ.
ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಹೊರಡಿಸಿದ ಹೇಳಿಕೆಯ ಪ್ರಕಾರ, ಪಾಟ್ನಾ, ಖಗಾರಿಯಾ, ಸಮಸ್ತಿಪುರ್, ಸಹರ್ಸಾ, ದರ್ಬಂಗಾ, ಮುಂಗೇರ್ ಮತ್ತು ಬೆಸುಸರೈ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳು ವರದಿಯಾಗಿವೆ.
ಪಾಟ್ನಾ ಜಿಲ್ಲೆಯ ಸಂಪತ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಹ್ಮಪುರ ಪ್ರದೇಶದಲ್ಲಿ ಮೂವರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಖಗಾರಿಯಾ ಜಿಲ್ಲೆಯಲ್ಲಿ, ಸೋಮವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಚೌತಮ್ ಮತ್ತು ಪರ್ಬಟ್ಟಾ ಪ್ರದೇಶಗಳಲ್ಲಿ ಮೂವರು ಮುಳುಗಿದ್ದಾರೆ ಎಂದು ಡಿಎಂಡಿ ಹೇಳಿಕೆ ತಿಳಿಸಿದೆ.
ಇದಲ್ಲದೆ, ಭಾನುವಾರದಿಂದ ದರ್ಬಂಗಾ ಮತ್ತು ಸಮಸ್ತಿಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಬೇಗುಸರೈ, ಮುಂಗೇರ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ತಲಾ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ, ಡಿಎಂಡಿ ತನ್ನ ಹೇಳಿಕೆಯಲ್ಲಿ ಮೃತರ ಗುರುತನ್ನು ಬಹಿರಂಗಪಡಿಸಿಲ್ಲ. ಪಾಟ್ನಾದಲ್ಲಿ ಸಂಭವಿಸಿದ ಭೀಕರ ಘಟನೆಯಲ್ಲಿ ಬಿಹಾರದ ಬ್ರಹ್ಮಪುರ ಕೊಳದಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಇಬ್ಬರು ಅವಳಿ ಸಹೋದರರು
ಸಾವನ್ನಪ್ಪಿದ್ದಾರೆ. ರಾಮಕೃಷ್ಣನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖೇಮ್ನಿಚಕ್‌ನಲ್ಲಿರುವ ಪೋಕರ್‌ನಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಈ ದುರಂತ ಘಟನೆಯ ನಂತರ ಅವರ ಕುಟುಂಬ ಮತ್ತು ಸಮುದಾಯದಲ್ಲಿ ಶೋಕ ಮಡುಗಟ್ಟಿದೆ. ಸ್ಥಳದಲ್ಲಿದ್ದ ಜನರ ಪ್ರಕಾರ, ಅವಳಿ ಸಹೋದರರಾದ ಸಾಹಿಲ್ ಕುಮಾರ್ ಮತ್ತು ಸೌರಭ್ ಕುಮಾರ್ ಗೋಪಾಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಹಪುರ ನಿವಾಸಿಗಳು.