ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗಳ ಪರಿಶೀಲನೆ

ಚಾಮರಾಜನಗರ, ನ.25:- ಗ್ರಾಮೀಣಾಭಿವೃದ್ದಿ ಇಲಾಖೆಯ ಆಯುಕ್ತರಾದ ಶಿಲ್ಪಾನಾಗ್ ಅವರು ಇಂದು ಚಾಮರಾಜನಗರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕುಡಿಯುವ ನೀರು ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ದಿ ಇಲಾಖೆಯ ಆಯುಕ್ತರಾದ ಶಿಲ್ಪಾನಾಗ್ ಅವರು ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದÀ ಕೈಗೊಂಡಿರುವ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.
ಕುಡಿಯುವ ನೀರು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ನಿರ್ವಹಿಸುವಾಗ ಯಾವುದೇ ಲೋಪಗಳು ಕಂಡುಬರದಂತೆ ಕೆಲಸ ನಿರ್ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಅಮಚವಾಡಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಿಥಿಲವಾಗಿರುವ ಶಾಲಾ ಕೊಠಡಿಗಳನ್ನು ಪರಿಶೀಲಿಸಿ ಬಿಸಿಯೂಟ ಯೋಜನೆಯಡಿ ಆಹಾರ ತಯಾರಿಸುತ್ತಿರುವುದನ್ನು ವೀಕ್ಷಿಸಿದರು.
ನಂತರ ಅಮಚವಾಡಿ ಮತ್ತು ಹರದನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯಾಧಿಕಾರಿಗಳು ಹಾಜರಾತಿ, ಕೋವಿಡ್ ವ್ಯಾಕ್ಸಿನೇಷನ್ ನೀಡುತ್ತಿರುವ ಬಗ್ಗೆ ಪರಿಶೀಲಿಸಿ ಪ್ರತಿದಿನ ಪ್ರಾಥಮಿಕ ಕೇಂದ್ರಕ್ಕೆ ಚಿಕಿತ್ಸೆಗೆ ಬರುತ್ತಿರುವವರ ಬಗ್ಗೆ ವೈಧ್ಯಾಧಿಕಾರಿಗಳಿಂದ ವಿವರ ಪಡೆದರು.
ತದನಂತರ ಹರದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದುಕಟ್ಟೆಮೋಳೆ ಮತ್ತು ನಾಗವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಹಮ್ಮಿಕೊಳ್ಳಲಾಗಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಗಂಗಾಧರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‍ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಇತರರು ಇದ್ದರು.