ಜಲ್ಲಿಕ್ರಶರ್ ಗಣಿಗಾರಿಕೆಯಿಂದ ಭೂಕಂಪದ ಅನುಭವ; ಬೆಚ್ಚಿಬಿದ್ದ ಜನ


ಸಂಜೆವಾಣಿ ವಾರ್ತೆ
ಸಿರುಗುಪ್ಪ. ಜು.31: ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಭಾನುವಾರ ಸಂಜೆ ಗ್ರಾಮದ ಪಕ್ಕದಲ್ಲಿ ಇರುವ ಗುಡ್ಡದಲ್ಲಿ ಜಲ್ಲಿಕ್ರಶರ್ (ಕಲ್ಲಿನ ಕ್ವಾರೆ) ಗಣಿಗಾರಿಕೆಯ ಸ್ಪೋಟದಿಂದಾಗಿ ಭೂಕಂಪನದ ಅನುಭವಕ್ಕೆ ಒಳಗಾದ ಘಟನೆ ನಡೆದಿದೆ.
ಏಕಾಏಕಿ ದೊಡ್ಡ ಮಟ್ಟದ ಸ್ಪೋಟದಿಂದಾಗಿ ಮನೆಯಲ್ಲಿನ ಪಾತ್ರೆ ಪಗಡೆ ಕೆಳಕ್ಕೆ ಬಿದ್ದವು, ಭೂಕಂಪನ ಅನುಭವ ಆದಂತಾಗಿ ಜನ ಮನೆಯಿಂದ ಹೊರಗೆ ಓಡಿ ಬಂದರು ಎಂದು ಗ್ರಾಮಸ್ಥ ಕನಕಪ್ಪ ತಿಳಿಸಿದರು.
ಗ್ರಾಮಕ್ಕೆ ಗ್ರಾಮವೇ ಧೂಳು ಮುಚ್ಚಿಕೊಂಡು ಧೂಳುಮಯ ಆಗಿದ್ದು ಕಂಡು ಇದು ಜಲ್ಲಿಕ್ರಶರ್ ಸ್ಪೋಟ ಎಂದು ತಿಳಿದ ಗ್ರಾಮದ ಜನರು ಕಲ್ಯಾಣಿ ಕ್ರಶರ್ ಮಾಲಿಕ ವೆಂಕಟೇಶ್ವರ ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಘಟನಾ ಸ್ಥಳಕ್ಕೆ ಆಗಮಿಸಿದ ತೆಕ್ಕಲಕೋಟೆ ಪೊಲೀಸ್ ಠಾಣೆಯ ಸಿ ಪಿ ಐ ಸುಂದರೇಶ್ ಎಚ್, ಪಿ ಎಸ್ ಐ ಶಾಂತಮೂರ್ತಿ ಹಾಗೂ ಸಿಬ್ಬಂದಿಯವರು ಜನರನ್ನು ನಿಯಂತ್ರಿಸಿದರು.
ಗ್ರಾಮವು ಧೂಳು ತುಂಬಿ ಉಸಿರುಗಟ್ಟಿದಂತಾಗಿ ಈ ಧೂಳಿನಲ್ಲಿ ಬಂದಂತಹ  ವಾಸನೆಗೆ ಹೆಂಗಸರು ಮತ್ತು  ಮಕ್ಕಳಿಗೆ ವಾಂತಿ ಬಂದಂತೆ ಆಯ್ತು ಎಂದು ಗ್ರಾಮಸ್ಥ ವಿಜಯ ಕುಮಾರ್ ತಿಳಿಸಿದರು.
ಹೇಳಿಕೆ: ಹಳೇಕೋಟೆ  ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ವೀರೇಶ ಮಾತನಾಡಿ, ಗ್ರಾಮದ ಸುತ್ತಲಿನ ಗುಡ್ಡಗಳಲ್ಲಿ ಒಟ್ಟು 7 ಕಲ್ಲಿನ ಕ್ವಾರೆ  ಗಳಿದ್ದು, ಅನುಮತಿ ಪಡೆದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೋರ್ ಬ್ಲಾಸ್ಟ್ ಮಾಡುತ್ತಿದ್ದಾರೆ. ಇದರಿಂದಾಗಿ ಇಂದಿನ ಸ್ಟೋಟದಿಂದಾಗಿ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.
 ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದವೆ, ನಾಳೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ತಿಳಿಸಲಾಗಿದ್ದು ಅಲ್ಲಿಯವರೆಗೆ ಎಲ್ಲಾ ಕ್ರಶರ್ ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ ಎಂದು ತೆಕ್ಕಲಕೋಟೆ ಪೊಲೀಸ್ ಠಾಣೆಯ ಸಿ.ಪಿ.ಐ ಸುಂದರೇಶ್ ಎಚ್ ತಿಳಿಸಿದರು.
ಗ್ರಾಮಸ್ಥರಾದ ಕನಕಪ್ಪ, ವೀರೇಶ, ಈರಣ್ಣ, ಕಾಳಿಂಗ, ಚನ್ನವೀರಪ್ಪ, ಗಂಗಪ್ಪ, ಗುರುಸ್ವಾಮಿ, ವಿರೇಶಾಚಾರಿ, ಹನುಮೇಶ, ನಾಗಪ್ಪ, ರಂಗಪ್ಪ, ಗಾದಿಲಿಂಗಪ್ಪ ಸೇರಿದಂತೆ ನೂರಾರು ಜನ ಇದ್ದರು.

One attachment • Scanned by Gmail