ಜಲಾವೃತ ಸಮಸ್ಯೆ : ನೆರವಿಗೆ ಧಾವಿಸದ ಆಡಳಿತ!


ಶಿವಮೊಗ್ಗ, ಜು. 13: ನಗರದ ಹೊರವಲಯ ಬಸವನಗಂಗೂರು ಕೆರೆ ನೀರು ಉಕ್ಕಿ ಹರಿಯುತ್ತಿರುವುದರಿಂದ, ತಗ್ಗು ಪ್ರದೇಶದಲ್ಲಿರುವ ಕೆ.ಹೆಚ್.ಬಿ ಕಾಲೋನಿಯಲ್ಲಿ ಚರಂಡಿಗಳು ಉಕ್ಕಿ ಹರಿದು ರಸ್ತೆ ಮೇಲೆ ನೀರು ಹರಿಯತ್ತಿದೆ.ಆದರೆ ಸಣ್ಣ ನೀರಾವರಿ ಇಲಾಖೆ ಹೊರತುಪಡಿಸಿದರೆ, ಇಲ್ಲಿಯವರೆಗೂ ತಾಲೂಕು ಆಡಳಿತವಾಗಲಿ, ಕರ್ನಾಟಕ ಗೃಹ ಮಂಡಳಿಯಾಗಲಿ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತವಾಗಲಿ ನಾಗರೀಕರ ಅಹವಾಲು ಆಲಿಸಲು ಮುಂದಾಗಿಲ್ಲ. ಸರಾಗವಾಗಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಇದು ಸ್ಥಳೀಯ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಮಳೆಗಾಲದ ವೇಳೆ ಜಲಾವೃತ ಉಂಟಾಗುವ ಸ್ಥಳಗಳಲ್ಲಿ ಕಾಲಮಿತಿಯೊಳಗೆ ನಾಗರೀಕರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಆದರೆ ಹಲವೆಡೆ ಇವ್ಯಾವ ಸ್ಪಂದನೆಯೂ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ಇತ್ತ ಆದ್ಯ ಗಮನಹರಿಸಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.