ಜಲಾವೃತ ಗ್ರಾಮಗಳಿಗೆ ಪರಂ ಭೇಟಿ: ಪರಿಹಾರ ಕಾರ್ಯಕ್ಕೆ ಸೂಚನೆ

ಕೊರಟಗೆರೆ, ಆ. ೬- ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಆದ ಭಾರೀ ಮಳೆಯಿಂದ ಸುವರ್ಣಮುಖಿ, ಜಯಮಂಗಲಿ ಹಾಗೂ ಗರುಡಾಚಲ ನದಿ ಪಾತ್ರದ ಗ್ರಾಮಗಳು ಜಲಾವೃತ್ತಗೊಂಡಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಚನ್ನಸಾಗರ ಸೇರಿದಂತೆ ತಾಲೂಕಿನ ಇನ್ನಿತರ ಗ್ರಾಮಗಳಿಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ತಕ್ಷಣ ಪರಿಹಾರ ಕಾರ್ಯದ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಚನ್ನಸಾಗರ ಸಮೀಪ ಜಯಮಂಗಲಿ ಸುವರ್ಣಮುಖಿ ಹಾಗೂ ಗರುಡಾಚಲ ಮೂರು ನದಿಗಳು ಸಂಗಮವಾಗುವ ಸ್ಥಳಕ್ಕೆ ಹೆಚ್ಚು ನೀರು ಹರಿದ ಪರಿಣಾಮ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿ ನಷ್ಟ ಉಂಟಾಗಿದೆ. ಇದರೊಂದಿಗೆ ಕೊರಟಗೆರ ತಾಲ್ಲೂಕಿನ ವೀರಸಾಗರ ಮತ್ತು ಚೀಲಗಾನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೂ ನೀರು ನುಗ್ಗಿದ ಪರಿಣಾಮ ಜನ ಸಂಕಷ್ಟಕ್ಕೆ ಈಡಾಗಿದ್ದ ಹಿನ್ನೆಲೆಯಲ್ಲಿ ಡಾ.ಜಿ. ಪರಮೇಶ್ವರ್ ಅವರು ತಾಲ್ಲೂಕು ಆಡಳಿತ ಸೇರಿದಂತೆ ಇನ್ನಿತರ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಳೆಯಿಂದ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಹಾನಿಗೊಳಗಾಗಿರುವ ದವಸ, ಧಾನ್ಯಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸೂಕ್ತ ರಕ್ಷಣೆಯೊಂದಿಗೆ ಪರಿಹಾರ ಕಲ್ಪಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ಟ
ಮಳೆಯಿಂದ ಹಾನಿಗೊಳಗಾಗಿರುವ ರೈತಾಪಿ ವರ್ಗ ತೋಟಗಳನ್ನು ತೊರೆದು ಗ್ರಾಮಗಳಿಗೆ ಆಗಮಿಸುವಂತಹ ಸಂಕಷ್ಟ ಎದುರಾಗಿದ್ದು, ಮತ್ತೆ ತಾಲೂಕಿನಲ್ಲಿ ಮಳೆಯಾದರೆ ಅನಾಹುತ ಎದುರಾಗುವ ಸಾಧ್ಯತೆಯೇ ಹೆಚ್ಚಾಗಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಳೆರಾಯನ ಆರ್ಭಟದಿಂದ ಸಂಕಷ್ಟ ಎದುರಾಗಿರುವ ಪ್ರದೇಶಗಳಲ್ಲಿ ಈಗಾಗಲೇ ತಹಶೀಲ್ದಾರ್ ನಾಹೀದಾ ಜಮ್ ಜಮ್ ಸೇರಿದಂತೆ ಕಂದಾಯ ಇಲಾಖೆ, ಪೊಲೀಸ್ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಮಳೆಯ ಆರ್ಭಟಕ್ಕೆ ಅನೇಕ ಗ್ರಾಮಗಳಲ್ಲಿ ನೂರಾರು ವಿದ್ಯುತ್ ಕಂಬಗಳು ಧರೆಗೆ ಉರುಳಿರುವ ಪರಿಣಾಮ ರಾತ್ರಿಯಿಡೀ ರೈತರು ಕತ್ತಲೆಯಲ್ಲಿ ಕಾಲ ಕಳೆಯುವ ಸಮಸ್ಯೆ ಉಂಟಾಗಿರುವ ಪರಿಣಾಮ ಬೆಸ್ಕಾಂ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್ ರವರೊಂದಿಗೆ ತಹಶೀಲ್ದಾರ್ ನಾಹೀದಾ ಜಮ್ ಜಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್ ಸೇರಿದಂತೆ ಸ್ಥಳೀಯ ಮುಖಂಡರು ತೆರಳಿ ಪರಿಶೀಲನೆ ನಡೆಸಿದರು.