ಜಲಾಂತರ್ಗಾಮಿ ನೌಕೆ ಮುಳುಗಿ ೫೩ ಮಂದಿ ಸಿಬ್ಬಂದಿ ಜಲಸಮಾಧಿ

ಬಾಲಿ, ಎ.೨೫- ಕಾಣೆಯಾಗಿದ್ದ ಜಲಾಂತರ್ಗಾಮಿ ನೌಕೆಗೆ ಸಂಬಂಧಪಟ್ಟಂತೆ ಹಲವು ವಸ್ತಗಳು ಸಿಕ್ಕಿದ ಬೆನ್ನಲ್ಲೇ ಜಲಾಂತರ್ಗಾಮಿ ನೌಕೆ ಮುಳುಗಿದೆ ಎಂದು ಇಂಡೋನೇಷ್ಯಾ ಘೋಷಿಸಿದೆ. ಬುಧವಾರ ಬಾಲಿ ದ್ವೀಪದಿಂದ ಪ್ರಯಾಣ ಬೆಳೆಸಿದ್ದ ಕೆಆರ್‌ಐ ನಂಗ್ಗಾಲಾ ೪೦೨ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿತ್ತು.
ನಾಪತ್ತೆಯಾಗಿದ ಜಲಾಂತರ್ಗಾಮಿಗಾಗಿ, ಅಮೇರಿಕಾದ ವಿಮಾನ, ಸೋನಾರ್ ಸಾಧನಗಳನ್ನು ಅಳವಡಿಸಿರುವ ಆಸ್ಟ್ರೇಲಿಯಾದ ಯುದ್ದನೌಕೆಗಳು, ಇಂಡೋನೇಷ್ಯಾದ ೨೦ ಹಡಗುಗಳು ಹಾಗೂ ನಾಲ್ಕು ಯುದ್ದ ವಿಮಾನಗಳು ಶೋಧಕಾರ್ಯಾಚರಣೆ ನಡೆಸಿದ್ದರು. “ನೌಕೆ ನಾಪತ್ತೆಯಾಗಿರುವ ಸ್ಥಳದಲ್ಲಿ ತೈಲ ಪದರ ಹಾಗೂ ಅವಶೇಷಗಳು ತೇಲುತ್ತಿರುವುದು ಪತ್ತೆಯಾಗಿವೆ. ಇವು ಜಲಾಂತರ್ಗಾಮಿ ಮುಳುಗಿರುವುದನ್ನು ಸೂಚಿಸುತ್ತವೆ” ಎಂದು ಸೇನಾ ಮುಖ್ಯಸ್ಥ ಹಾದಿ ಜಾಜಾಟೊ ತಿಳಿಸಿದ್ದಾರೆ. ನೌಕೆ ಕಾಣೆಯಾಗಿದೆ ಎಂದೇ ಇಂಡೋನೇಷ್ಯಾದ ಅಧಿಕಾರಿಗಳು ಪರಿಗಣಿಸಿದ್ದರು. ಆದರೆ ಜಲಾಂತರ್ಗಾಮಿ ನೌಕೆಯ ಆಮ್ಲಜನಕ ಪೂರೈಕೆ ಶನಿವಾರ ಮುಂಜಾನೆಯ ವೇಳೆಗೆ ಖಾಲಿಯಾಗಲಿದೆ” ಎಂದು ಹೇಳಿದ್ದರು. ನೌಕೆ ಸ್ಪೋಟವಾಗುತ್ತಿದ್ದರೆ, ಚೂರು ಚೂರಾಗುತ್ತಿತ್ತು. ನೌಕೆಯು ೩೦೦ ಮೀಟರ್‌ನಿಂದ ೪೦೦ ಮೀಟರ್‌ಗೆ ಹಾಗೂ ಅಲ್ಲಿಂದ ೫೦೦ ಮೀಟರ್ ಸಾಗುತ್ತಿದ್ದಂತೆ ಕ್ರಮೇಣ ಬಿರುಕು ಕಾಣಿಸಿಕೊಂಡಿದೆ. ಅಲ್ಲಿ ಒಂದು ವೇಳೆ ಸ್ಪೋಟವಾಗಿದ್ದರೆ ಅದನ್ನು ಸೋನಾರ್ ಗ್ರಹಿಸುತ್ತಿತ್ತು” ಎಂದು ನೌಕಾಪಡೆ ಮುಖ್ಯಸ್ಥ ಯುಡೊ ಮಾರ್ಗೊನೊ ತಿಳಿಸಿದ್ದಾರೆ. ಜಲಾಂತರ್ಗಾಮಿಯು ಸುಮಾರು ೬೦೦-೭೦೦ ಮೀಟರ್ ಆಳದವರೆಗೂ ಇಳಿದು ಬಳಿಕ ಮುಳುಗಿರಬಹುದು ಎಂದು ನೌಕಾಪಡೆ ಅಂದಾಜಿಸಿತ್ತು. ಆದರೆ, ಅಷ್ಟು ಆಳದಲ್ಲಿನ ನೀರಿನ ಒತ್ತಡದಲ್ಲಿ ನೌಕೆ ಉಳಿಯುವುದು ಅಸಾಧ್ಯ ಎಂದು ಪರಿಗಣಿಸಲಾಗಿತ್ತು. ಎಲೆಕ್ಟ್ರಿಕ್ ಕಾರ್ಯಾಚರಣೆಯು ವೈಫಲ್ಯಗೊಂಡ ಕಾರಣ ನೌಕೆಯು ತುರ್ತು ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗದೇ ಪುನಃ ಮೇಲೆ ಬರಲು ಆಗಿಲ್ಲ ಎಂದು ನೌಕಾಪಡೆ ತಿಳಿಸಿತ್ತು. ಅದರೆ, ನೌಕೆ ಮುಳುಗಿರುವುದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.