ಜಲಾಂತರ್ಗಾಮಿ ನಾಪತ್ತೆ ಘಟನಾ ಸ್ಥಳದಲ್ಲಿ ನಿಗೂಢ ಶಬ್ದ

ನ್ಯೂಯಾರ್ಕ್,ಜೂ.೨೧- ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳಿ, ಬಳಿಕ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಪ್ರವಾಸಿಗರ ಜಲಾಂತರ್ಗಾಮಿಗಾಗಿ (ಸಬ್‌ಮೆರ್ಸಿಬಲ್) ಹುಡುಕಾಟ ಮುಂದುವರೆದಿದೆ. ಸದ್ಯ ಇತ್ತೀಚಿಗಿನ ವರದಿ ಪ್ರಕಾರ ಘಟನಾ ಸ್ಥಳದಲ್ಲಿ ಶಬ್ದ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿ ಸಂಸ್ಥೆ ಓಷನ್‌ಗೇಟ್‌ನ ಜಲಾಂತರ್ಗಾಮಿಯಲ್ಲಿ ಐವರು ಪ್ರವಾಸಿಗರು ಪ್ರಯಾಣಿಸುತ್ತಿದ್ದು, ಯಾತ್ರೆ ಆರಂಭಿಸಿದ ಸುಮಾರು ೧:೪೫ ಗಂಟೆಗಳ ಬಳಿಕ ಸಂಪರ್ಕ ಕಡಿತಗೊಂಡಿತ್ತು. ಇದೀಗ ನಾಪತ್ತೆಯಾದ ಸ್ಥಳದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಕ್ಕೆ ಶಬ್ದವೊಂದು ಕೇಳಿ ಬಂದಿದೆ. ಇದರಿಂದ ಶೋಧಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕಾದ ತಟರಕ್ಷಣಾ ಪಡೆ (ಕೋಸ್ಟ್‌ಗಾರ್ಡ್), ಘಟನಾ ಸ್ಥಳದಿಂದ ಕೆನಡಾದ ಪಿ-೩ ವಿಮಾನವು ಶಬ್ದವನ್ನು ಕೇಳಿದೆ, ಇದನ್ನು ಅಮೆರಿಕಾ ನೌಕಾಪಡೆಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ರಿಮೋಟ್ ಚಾಲಿತ ವಾಹನ (ಆರ್‌ಒವಿ)ದ ಹುಡುಕಾಟಗಳು ಋಣಾತ್ಮಕ ಫಲಿತಾಂಶಗಳನ್ನು ನೀಡಿವೆ. ಇದರ ಹೊರತಾಗಿಯೂ ಶೋಧಕಾರ್ಯ ಮುಂದುವರೆಯಲಿದೆ ಎಂದು ತಿಳಿಸಿದೆ. ಅಲ್ಲದೆ ಶಬ್ದದ ಮೂಲವನ್ನು ಅನ್ವೇಷಿಸಲು ನೀರೊಳಗಿನ ಕಾರ್ಯಾಚರಣೆಗಳನ್ನು ಸ್ಥಳಾಂತರಿಸಲಾಗಿದೆ. ಸದ್ಯ ಶಬ್ದ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನಾಲ್ಕು ಸೋನಾರ್ (ತರಂಗ ಅಳೆಯುವ ಮಾಪನ)ಗಳನ್ನು ಬಳಸಲಾಗಿದೆ. ಅಲ್ಲದೆ ನಾಲ್ಕು ಗಂಟೆಗಳ ಬಳಿಕವೂ ಶಬ್ದ ಕೇಳಿ ಬಂದಿದೆ ಎನ್ನಲಾಗಿದೆ. ಟೈಟಾನಿಕ್ ಹಡಗಿನ ಅವಶೇಷವು ನ್ಯೂಫೌಂಡ್‌ಲ್ಯಾಂಡ್‌ನ ಸೇಂಟ್ ಜಾನ್ಸ್‌ನ ದಕ್ಷಿಣಕ್ಕೆ ಸುಮಾರು ೪೩೫ ಮೈಲಿಗಳು (೭೦೦ ಕಿಮೀ) ಇದೆಯಾದರೂ ರಕ್ಷಣಾ ಕಾರ್ಯಾಚರಣೆಯನ್ನು ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ನಿಂದ ನಡೆಸಲಾಗಿತ್ತು. ನಾಪತ್ತೆಯಾಗಿರುವ ಸಬ್‌ಮೆರಿನ್ ಓಷನ್‌ಗೇಟ್‌ನ ಸಬ್‌ಮೆರ್ಸಿಬಲ್ ಆಗಿದ್ದು, ಸುಮಾರು ಐವರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಅಲ್ಲದೆ ನಾಲ್ಕು ದಿನಗಳ ಅವಧಿಗೆ ತುರ್ತು ಆಮ್ಲಜನಕ ಪೂರೈಕೆ ಸಾಮರ್ಥ್ಯ ಹೊಂದಿದೆ. ಆದರೆ ಆದರೆ ಸದ್ಯ ಜಲಾಂತರ್ಗಾಮಿಯಲ್ಲಿ ಕೇವಲ ೩೦ ಗಂಟೆಗಳಿಗಾಗುವಷ್ಟು ಪ್ರಮಾಣ ಉಳಿದಿದ್ದು, ಹಾಗಾಗಿ ಶೋಧ ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡುವ ಅಗತ್ಯವಿದೆ.