‘ಜಲಸಿರಿ’ ಹೈಲಿಪ್ಟ್ ಟ್ಯಾಂಕ್ ನಿರ್ಮಾಣದ ಹಿಂದೆ ಅವ್ಯವಹಾರ…!

ಬಿಜೆಪಿ ಸದಸ್ಯರಿಂದ ಮುಖ್ಯಮಂತ್ರಿಗಳಿಗೆ ದೂರು-ಸಮಗ್ರ ತನಿಖೆಗೆ ಒತ್ತಾಯ

ಪುತ್ತೂರು, ನ.೧೩- ಪುತ್ತೂರು ನಗರದ ಜನತೆಗೆ ದಿನದ ೨೪ ಗಂಟೆಯೂ ನೀರು ನೀಡುವ ಮಹತ್ವಾಕಾಂಕ್ಷಿ ಂಯೋಜನೆ ‘ಜಲಸಿರಿ’ ಇದೀಗ ಗ್ರಹಣ ವಕ್ಕರಿಸಿದೆ.  ಈ ಯೋಜನೆಯಲ್ಲಿ ದಿನಿರ್ಮಿಸಲು ಉದ್ದೇಶಿತವಾದ ರೂ.೩ ಕೋಟಿ ವೆಚ್ಚದ ಹೈಲಿಪ್ಟ್ ಟ್ಯಾಂಕ್ ನಿರ್ಮಾಣದಲ್ಲಿ ಅವ್ಯವಹಾರ ಎಸಗಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನಗರಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ಭಾಮಿ ಅಶೋಕ್ ಶೆಣೈ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ.

ಪುತ್ತೂರು ನಗರದ ಕರ್ಮಲಗುಡ್ಡದಲ್ಲಿ ೧.೫೦ ಎಕರೆ ಖಾಸಗಿ ಭೂಮಿಯಲ್ಲಿ ಈ ಟ್ಯಾಂಕ್ ನಿರ್ಮಾಣಕ್ಕೆ ಪೂರ್ವ ತಯಾರಿ ನಡೆದಿತ್ತು. ಇದೀಗ ಕರ್ಮಲಗುಡ್ಡದ ಈ ಸ್ಥಳವನ್ನು ಭೂ ಸ್ವಾದೀನಪಡಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಸರ್ಕಾರಕ್ಕೆ ಅಪಾರ ಆರ್ಥಿಕ ನಷ್ಟವಾಗುವಂತೆ ಪರಿಹಾರ ಧನ ನಿಗದಿ ಪಡಿಸಲಾಗಿದೆ. ಈ ಟ್ಯಾಂಕ್ ನಿರ್ಮಾಣದ ಪ್ರದೇಶ ಯಾವುದೇ ಸಂಪರ್ಕ ರಸ್ತೆಗಳಿಲ್ಲದ ಸ್ಥಳವಾಗಿದ್ದು, ಹೆಲಿಕಾಪ್ಟರ್ ನಲ್ಲಿ ಮಾತ್ರ ಇಲ್ಲಿಗೆ ತೆರಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಇದೇ ಸ್ಥಳವನ್ನು ಹೈಲಿಪ್ಟ್ ಟ್ಯಾಂಕ್ ನಿರ್ಮಾಣಕ್ಕೆ ಆಯ್ಕೆ ಮಾಡಿದ ಸಂದರ್ಭದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಅವರು ರಸ್ತೆ ಸಂಪರ್ಕ ರಹಿತ ಪ್ರದೇಶ ಎನ್ನುವ ಹಿನ್ನಲೆಯಲ್ಲಿ ಭೂ ಸ್ವಾದೀನತೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದರ ಜತೆ ಈ ಪ್ರದೇಶದ ಪಕ್ಕದಲ್ಲಿರುವ ತೆಂಕಿಲಗುಡ್ಡದಲ್ಲಿ ಭೂಕುಸಿತದ ಅಪಾಯವೂ ಇದೆ. ಈ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿ ಪಡೆಯದೆ ಇದೀಗ ಹೈಲಿಪ್ಟ್ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಕಡತ ಸಿದ್ಧತೆ ಮತ್ತು ರೂ.೩ ಕೋಟಿ ಪರಿಹಾರ ನೀಡುವ ವಿಚಾರದಲ್ಲಿ ಜಲಸಿರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರ ನೇರ ಕೈವಾಡ ಇದೆ ಎಂದು ಭಾಮಿ ಅಶೋಕ್ ಶೆಣೈ ಅವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಜತೆಗೆ ಭೂ ಪರಿವರ್ತನಾ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ  ವಿಚಾರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಈ ಅಧಿಕಾರಿಯನ್ನು ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಪುತ್ತೂರು ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವಿದ್ದರೂ ಈ ಕುರಿತು ಪರಮರ್ಶೆಗೆ ಅವಕಾಶವಿದ್ದರೂ ಕೌನ್ಸಿಂಲ್ ಆಡಳಿತವು ಅಸ್ತಿತ್ವಕ್ಕೆ ಬರುವ ಮೊದಲೇ ಆತುರ ಆತುರವಾಗಿ ಆಡಳಿತಶಾಹಿಯೇ ನೇರವಾಗಿ ಹಣ ಪಾವತಿಸಿ ಜಮೀನಿನ ನೋಂದಣಿ ಪ್ರಕ್ರಿಯೆಯನ್ನು ನಡೆಸಲು ಅವಸರ ಮಾಡಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಅಲ್ಲದೇ, ಚುನಾಯಿತ ಜನಪ್ರತಿನಿಧಿಗಳಿಗೆ ಅಗೌರವ ಮಾಡಿದಂತಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಭೂ ಸ್ವಾಧೀನತಾ ಪ್ರಕ್ರಿಯೆಯ ಕುರಿತಂತೆ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿಯವರಿಗೂ ಅರ್ಜಿದಾರರು ದೂರಿನ ಪ್ರತಿಯನ್ನು ರವಾನಿಸಿದ್ದಾರೆ. ಸ್ಥಳೀಯ ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವ ಬಿ. ಬಸವರಾಜು ಅವರಿಗೂ ರವಾನಿಸಲಾಗಿದೆ. ಈ ಯೋಜನೆಯ ಕುರಿತಂತೆ ಅಧಿಕಾರಿಗಳಿಂದ ನಡೆದಿರುವ ತಪ್ಪುಗಳನ್ನು ತನಿಖೆ ಮಾಡಿದರೆ ಒಟ್ಟು ಸತ್ಯ ಬಹಿರಂಗವಾಗುತ್ತದೆ ಎಂದು ಭಾಮಿ ಅಶೋಕ್ ಶೆಣೈ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ನಗರಸಭಾ ವ್ಯಾಪ್ತಿಯಲ್ಲಿ ಅನುಷ್ಟಾನಗೊಳ್ಳುವ ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಅಥವಾ ನಗರಸಭೆಗೆ ಯಾವುದೇ ಆರ್ಥಿಕ ನಷ್ಟವಾಗುವ ಕ್ರಮಗಳಿಗೆ ಬಿಜೆಪಿ ನೇತೃತ್ವದ ನಗರಸಭಾ ಆಡಳಿತದಲ್ಲಿ ಅವಕಾಶವಿಲ್ಲ. ಪಾರದರ್ಶಕ ಮತ್ತು ಜನಸ್ನೇಹಿ ಆಡಳಿತಕ್ಕೆ ಮಾತ್ರ ಆದ್ಯತೆ. ಜಲಸಿರಿ ಯೋಜನೆಯ ಟ್ಯಾಂಕ್ ನಿರ್ಮಾಣ ಕುರಿತಂತೆ ಭೂ ಸ್ವಾಧೀನತಾ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದರೆ ಅದನ್ನು ತನಿಖೆ ಮಾಡಿಸದೆ ಬಿಡುವುದಿಲ್ಲ.

ಕೆ. ಜೀವಂಧರ್ ಜೈನ್, ಅಧ್ಯಕ್ಷರು, ನಗರಸಭೆ ಪುತ್ತೂರು