ಜಲಸಂಪನ್ಮೂಲ ಖಾತೆ ವಿಜಯಪುರಕ್ಕೆ ಕೊಡಲು ಆಗ್ರಹ : ಸಂಗಮೇಶ ಸಗರ

ವಿಜಯಪುರ :ಮೇ.20: ಪಂಚನದಿಗಳ ಜಿಲ್ಲೆಯಂದೇ ಖ್ಯಾತಿಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಯ ಸಾಕಷ್ಟು ನೀರಿದ್ದರು ರೈತರಿಗೆ ಬವಣೆ ತಪ್ಪಿದಲ್ಲ, ಅತೀವೃಷ್ಠಿ, ಅನಾವೃಷ್ಠಿಗಳಿಂದ ಸಾಕಷ್ಟ ರೈತರು ನಷ್ಟ ಅನುಭವಿಸುತ್ತಿರುವುದು ಪ್ರತಿವರ್ಷ ಕಾಣುತ್ತೇವೆ, ಕಳೆದ ಬಾರಿ ಎಂ.ಬಿ.ಪಾಟೀಲ ಹಾಗೂ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಸಚಿವ ಸ್ಥಾನದಿಂದ ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಲಾಗಿಯೂ ಇನ್ನೂ ಪ್ರಮುಖ ಕೆಲಸಗಳು ಬಾಕಿ ಉಳಿದಿವೆ.
ಕೃಷ್ಣಾ ನದಿಯ ಅಪಾರ ಜಲರಾಶಿಯೂ ಜಿಲ್ಲೆಯ ಎಲ್ಲಾ ರೈತರಿಗೆ ಮುಟ್ಟಬೇಕಾದರೆ ಆಲಮಟ್ಟಿಯ ಲಾಲ ಬಹೂದ್ದೂರ ಶಾಸ್ತ್ರೀ ಜಲಾಶಯವನ್ನು 524.256 ಮೀಟರ ಎತ್ತರ ಮಾಡಬೇಕು, ಇದರಿಂದ ನಷ್ಟಗೊಂಡ ರೈತರಿಗೆ ಕೂಡಲೇ ಪರಿಹಾರ ಕೊಡಬೇಕು, ಬಾಧಿತ ರೈತರಿಗೆ ಪುರ್ನವಸತಿ ಕಲ್ಪಿಸಿಕೊಡುವ ಜೊತೆಗೆ ಬೆಳೆ ಪರಿಹಾರ ಕೊಡಬೇಕು, ಆಗ ಮಾತ್ರ ವಿಜಯಪುರ ಜಿಲ್ಲೆಯ 13 ತಾಲೂಕಿನಲ್ಲಿ ಸಂಪೂರ್ಣ ನೀರಾವರಿ ಮಾಡಿದಂತಾಗಿ ಈ ಭಾಗದ ರೈತರ ಬಾಳನ್ನು ಹಸನಾಗಿಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ..
ವಿಜಯಪುರ ಜಿಲ್ಲೆಯಲ್ಲಿ ಜಲಸಂಪನ್ಮೂಲ ಖಾತೆ ನಿರ್ವಹಿಸುವ ಸಮರ್ಥ ನಾಯಕರಿದ್ದಾರೆ, ಎಂ.ಬಿ ಪಾಟೀಲರಿಗೆ ಜಲಸಂಪನ್ಮೂಲ ಖಾತೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ ಅನುಭವವಿದೆ ಅವರಿಗೆ ಜಲಸಂಪನ್ಮೂಲ ಖಾತೆ ನೀಡಬೇಕೆಂದು ಜಿಲ್ಲೆಯ ಸಮಸ್ತ ರೈತರ ಪರವಾಗಿ ಒತ್ತಾಯಿಸುತ್ತೇವೆ ಎಂದು ಸಂಗಮೆಶ ಸಗರ ಹೇಳಿದರು.