ಜಲಶಕ್ತಿ ಕೇಂದ್ರದ ಸದುಪಯೋಗಕ್ಕೆ ಸಲಹೆ : ಜಂಟಿ ಕಾರ್ಯದರ್ಶಿ ಎಂ. ಮಹೇಶ್ವರರಾವ್

ಯಾದಗಿರಿ: ಜು, 17; ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ, ಏರುತ್ತಿರುವ ಜಾಗತಿಕ ತಾಪಮಾನದಿಂದ ಜಲ ಮೂಲಗಳು ಬತ್ತಿ ಹೋಗಿ, ಕೃಷಿ ಚಟುವಟಿಕೆಗೆ, ಗ್ರಾಮೀಣ ಪ್ರದೇಶದ ಜನರಿಗೆ, ಪಶು-ಪಕ್ಷಿಗಳಿಗೆ ಅಗತ್ಯವಾದ ಕುಡಿಯುವ ನೀರಿಗಾಗಿ ಉಂಟಾಗುವ ಸಮಸ್ಯೆಗಳ ಪರಿಹರಿಸಲು ಸಾರ್ವಜನಿಕರು ಯಾದಗಿರಿ ಜಿಲ್ಲಾ ಪಂಚಾಯಿತಿನಲ್ಲಿರುವ ಜಲಶಕ್ತಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ಜಲಶಕ್ತಿ ಅಭಿಯಾನ ಜಂಟಿ ಕಾರ್ಯದರ್ಶಿ ಎಂ. ಮಹೇಶ್ವರರಾವ್ ಅವರು ಹೇಳಿದರು.

    ಗ್ರಾಮೀಣ ಪ್ರದೇಶದ ಜನರಲ್ಲಿ ನೀರಿನ ಬಳಕೆ, ಸಂರಕ್ಷಣೆ ಮಾಡುವ ಕುರಿತು ಮಾಹಿತಿ ನೀಡಲು ಜಿಲ್ಲಾ ಪಂಚಾಯಿತಿನಲ್ಲಿ ತೆರೆದ ಜಲಶಕ್ತಿ ಕೇಂದ್ರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

   ಜಲಶಕ್ತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮಿಷನ್ ಅಮೃತ್ ಸರೋವರ ಅಭಿಯಾನದಡಿ ಹೊಸ ಜಲ ಮೂಲಗಳನ್ನು ಸೃಷ್ಠಿಸುವ ಜೊತೆ ಗ್ರಾಮೀಣ ಪ್ರದೇಶದಲ್ಲಿ ಇರುವ ಹಳ್ಳ-ಕೊಳ್ಳ, ಕೆರೆ-ಕುಂಟೆ, ಕಲ್ಯಾಣಿ ಸೇರಿದಂತೆ ಇತರೆ ಸಾಂಪ್ರದಾಯಿಕ ಜಲ ಮೂಲಗಳನ್ನು ಪುನಶ್ಚೇತನಗೊಳಿಸಿ ಅಭಿವೃದ್ಧಿಪಡಿಸಿದರೆ ಭವಿಷ್ಯತ್ತಿನಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದರು.

    ಗ್ರಾಮ ಪಂಚಾಯಿತಿ ಜಲ ಮೂಲಗಳನ್ನು ಅಭಿವೃದಿಪಡಿಸಿ ನಿರ್ವಹಣೆ ಮಾಡಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಿಷನ್ ಅಮೃತ ಸರೋವರ ಕಾರ್ಯಕ್ರಮದಡಿ ಕೆರೆಗಳ ಸಮಗ್ರ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾಮಗಾರಿ ಕೈಗೊಂಡು ಗ್ರಾಮೀಣ ಪ್ರದೇಶದ ಜಲ ಮೂಲ ರಕ್ಷಿಸಿ, ಅಭಿವೃದ್ಧಿ ಪಡಿಸಿದರೆ ಪಶು-ಪಕ್ಷಿಗಳಿಗೆ, ಜನರಿಗೆ ಕುಡಿಯುವ ನೀರು, ಗೃಹ ಬಳಕೆ, ಪರಿಸರ ಬದಲಾವಣೆಗೆ ಪೂರಕವಾಗುತ್ತದೆ. ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾದರೆ ಭೂಮಿಯ ಅಂತರ್ಜಲದ ಪ್ರಮಾಣ ಹೆಚ್ಚಾಗುತ್ತದೆ. ಹೀಗಾಗಿ ಕೆಲವು ಕೆರೆಗಳನ್ನು ಅಂತರ್ಜಲ ಮಟ್ಟ ಹೆಚ್ಚಿಸಲೆಂದೆ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

   ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಆರ್ ನಾಯ್ಕ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ನೀರು ಬಳಕೆ, ಸಂರಕ್ಷಣೆ ಮಾಡುವ ಕುರಿತು ಮಾಹಿತಿ ನೀಡಲು ಜಿಲ್ಲಾ ಪಂಚಾಯಿತಿನಲ್ಲಿ ಪ್ರತ್ಯೇಕವಾಗಿ ಜಲಶಕ್ತಿ ಕೇಂದ್ರವನ್ನು ತೆರೆಯಲಾಗಿದೆ. ಇದರ ಮೂಲಕ ಗ್ರಾಮೀಣ ಜನರು ಬಚ್ಚಲು ನೀರನ್ನು ಹರಿಬಿಡದೆ ಭೂಮಿಯಲ್ಲಿ ಇಂಗಿಸಲು ನರೇಗಾದಡಿ ಇಂಗು ಗುಂಡಿ, ಜನರ ವೈಯಕ್ತಿಕ ಕೊಳವೆ ಭಾವಿಗಳಿದ್ದರೆ ಮಳೆ ನೀರು ಕೋಯ್ಲು ಮಾಡಲು ನರೇಗಾ ಯೋಜನೆಯಡಿ ಅವಕಾಶವಿದೆ ಎಂದು ಮಾಹಿತಿ ನೀಡಿದರು.

 ಗ್ರಾಮೀಣ ಪ್ರದೇಶದ ಜಲ ಮೂಲಗಳ ರಕ್ಷಿಸಿ ನಿರ್ವಹಣೆ ಮಾಡುವ ಜೊತೆ ಅಂತರ್ಜಲ ಮಟ್ಟ ಹೆಚ್ಚಿಸುವ ಜಲಮೂಲಗಳ ಅಭಿವೃದ್ಧಿ, ರೈತರ, ಮಹಿಳೆಯರ ನೀರಿನ ಸಮಸ್ಯೆ ಪರಿಹರಿಸಲು ಜಲ ಸಂರಕ್ಷಣೆಯಿಂದ ಕೃಷಿ ಚಟುವಟಿಕೆ, ಅರಣ್ಯೀಕರಣ ಅಭಿವೃದ್ಧಿ, ಪರಿಸರ ಸಮತೋಲನ ರಕ್ಷಿಸಿ, ಗ್ರಾಮೀಣ ಜನರ ಆರೋಗ್ಯ ಸುಧಾರಿಸಿ, ಉದ್ಯೋಗ ಕಲ್ಪಿಸುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಿ ಮಾಡಿ ಗ್ರಾಮೀಣ ಸಮುದಾಯಗಳಲ್ಲಿ ಸಮರ್ಪಕ ನೀರಿನ ಸಂರಕ್ಷಣೆ, ಸದ್ಬಳಕೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಜೊತೆ ಗ್ರಾಮೀಣ ಪ್ರದೇಶಕ್ಕೆ ಜಲ ಭದ್ರತೆ ನೀಡುವುದು ಜಲಶಕ್ತಿ ಕೇಂದ್ರದ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಲಶಕ್ತಿ ಅಭಿಯಾನದ ವಿಜ್ಞಾನಿ ಎಸ್‍ಪಿ ನಯಾಗಮ್, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯಿತಿ ಯೋಜನಾ ನಿದೇಶಕ ವೆಂಕಟೇಶ, ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಬಿ ಸಜ್ಜನ್, ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪವಾರ, ರಾಮಚಂದ್ರ ಬಸೂದೆ, ಎಡಿಪಿಸಿ ಬನ್ನಪ್ಪ ಬೈಟಪುಲ್ಲಿ, ಡಿಎಂಐಎಸ್ ಲಕ್ಷ್ಮೀನಾರಾಯಣ, ಡಿಐಇಸಿ ಪರಶುರಾಮ, ಡಿಎನ್‍ಆರ್‍ಎಮ್ ಎಕ್ಸ್ಫರ್ಟ್ ಪ್ರಶಾಂತ, ಕೃಷಿ, ಅರಣ್ಯ, ಆರೋಗ್ಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.