ಜಲಶಕ್ತಿ ಅಭಿಯಾನ ಜಾರಿ : ಈಶ್ವರಪ್ಪ

ಬೆಂಗಳೂರು, ಮಾ. ೨೯- ರಾಜ್ಯದಲ್ಲಿ ಜಲಶಕ್ತಿಯ ಅಭಿಯಾನ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವ ಅಭಿಯಾನವನ್ನು ಆರಂಭಿಸಲಾಗಿದ್ದು, ಈ ಅಭಿಯಾನ ಜಾರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಗ್ರಾಮಿಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ವಿಕಾಸಸೌಧದಲ್ಲಿಂದು ಜಲಶಕ್ತಿಯ ಅಭಿಯಾನ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿ, ಮಾತನಾಡಿದ ಅವರು ಬೇಸಿಗೆ ಸಂದರ್ಭದಲ್ಲಿ ಜನ ಮತ್ತು ಜಾನುವಾರುಗಳು ನೀರಿಗಾಗಿ ಪರಿತಪಿಸುವ ಸಮಸ್ಯೆ ರಾಜ್ಯದ ಹಲವಡೆ ಇದೆ. ಹಾಗೆಯೇ ಅಕಾಲಿಕ ಮತ್ತು ಅನಿಶ್ಚಿತ ಮಳೆಯಿಂದಾಗಿ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಪ್ರಧಾನಿ ಮೋದಿಯವರು ಕಳೆದ ೨೨ ರಂದು ‘ಕ್ಯಾಚ್‌ದ ರೈನ್ ಅಭಿಯಾನಕ್ಕೆ ಚಾಲನೆ ನೀಡಿದ್ದು ಅದರಂತೆ ಈ ಜಲಶಕ್ತಿ ಅಭಿಯಾನ ರಾಜ್ಯದಲ್ಲೂ ಇದೇ ೨೨ ರಿಂದ ಆರಂಭವಾಗಿದ್ದು, ೨೦೨೧ ನ. ೩೦ರವರೆಗೂ ನಡೆಯಲಿದೆ ಎಂದರು.
ರಾಜ್ಯದಲ್ಲೂ ಈ ಅಭಿಯಾನದಡಿ ೩ ದಿನಗಳಲ್ಲಿ ವ್ಯಾಪಕವಾಗಿ ಜಲಸಂರಕ್ಷಣೆ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಯೋಜನೆಯ ವೆಚ್ಚದಲ್ಲಿ ಶೇ. ೬೫ ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗೆ ಮೀಸಲಿಡುವುದು ಕಡ್ಡಾಯವಾಗಿದೆ ಎಂದರು.
ಈ ಅಭಿಯಾನದಡಿ ಸಮಗ್ರ ಕೆರೆ ಅಭಿವೃದ್ಧಿ, ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆ ಏರಿ ದುರಸ್ಥಿ, ಬದು ನಿರ್ಮಾಣ, ಕಲ್ಯಾಣ ಪುನಶ್ಚೇತನ, ನಾಲಾ ಪುನಶ್ಚೇತನ, ಗೋ ಕಟ್ಟೆ, ಕೆರೆಗಳ ನಿರ್ಮಾಣ, ಬೋರ್‌ವೆಲ್ ರೀಚಾರ್ಜ್, ಮಳೆ ನೀರು ಕೊಯ್ಲು, ಅರಣ್ಯೀಕರಣ, ಚೆಕ್ ಡ್ಯಾಂ ಹೂಳು ತೆಗೆಯುವುದು, ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದರು.