ಜಲಶಕ್ತಿ ಅಭಿಯಾನ ಕಾಮಗಾರಿಗಳ ಪೂರ್ಣಗೊಳಿಸಲು ಸೂಚನೆ

ದಾವಣಗೆರೆ ಏ. 17; ನೀರಿನ ಸದ್ಬಳಕೆ ಹಾಗೂ ಸಮಗ್ರ ನಿರ್ವಹಣೆ ನಿಟ್ಟಿನಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಂಡು, ಅಂತರ್ಜಲ ವೃದ್ಧಿಸಲು ಸರ್ಕಾರ ರೂಪಿಸಿರುವ ಜಲಶಕ್ತಿ ಅಭಿಯಾನದಡಿ ಕೈಗೊಳ್ಳಬೇಕಾದ ಎಲ್ಲ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವುದರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಏರ್ಪಡಿಸಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ಡಿಸ್ಟಿçಕ್ಟ್ ಡೆವೆಲಪ್‌ಮೆಂಟ್ ಕೋ-ಆರ್ಡಿನೇಷನ್ & ಮಾನಿಟರಿಂಗ್ ಕಮಿಟಿ-ಡಿಡಿಸಿಎಂಸಿ) ‘ದಿಶಾ’ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಜಲಶಕ್ತಿ ಅಭಿಯಾನದಡಿ ಉದ್ಯೋಗಖಾತ್ರಿ ಯೋಜನೆಯಲ್ಲಿ ಸಮಗ್ರ ನೀರು ಸಂರಕ್ಷಣೆ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬಹುದಾದ ಕೆರೆಗಳ ಅಭಿವೃದ್ಧಿ, ಕೆರೆ ಹೂಳೆತ್ತುವುದು, ಬೋರ್‌ವೆಲ್ ರೀಚಾರ್ಜ್, ಗೋಕಟ್ಟೆ, ಕಲ್ಯಾಣಿಗಳ ಅಭಿವೃದ್ಧಿ, ಚೆಕ್‌ಡ್ಯಾಂಗಳ ಹೂಳೆತ್ತುವುದು ಸೇರಿದಂತೆ ವಿವಿಧ ಜಲಸಂರಕ್ಷಣೆಯ ಕಾಮಗಾರಿಗಳನ್ನು ಈಗಾಗಲೆ ಗುರುತಿಸಲಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ 100 ದಿನಗಳ ಒಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಕೈಗೊಂಡರೆ, ಮಳೆ ನೀರು ಸಂಗ್ರಹಣೆಗೊಂಡು ಅಂತರ್ಜಲ ಅಭಿವೃದ್ಧಿಯಾಗುವುದರ ಜೊತೆಗೆ ಜಿಲ್ಲೆಯ ಹಸಿರೀಕರಣಕ್ಕೂ ನೆರವಾಗಲಿದೆ, ಅಲ್ಲದೆ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಸೃಷ್ಟಿಯಾಗಿ ಕೂಲಿಕಾರರಿಗೆ ನೆರವಾಗಲಿದೆ. ಇದೇ ಯೋಜನೆಗಳಡಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಆವರಣದಲ್ಲಿರುವ ಬೋರ್‌ವೆಲ್‌ಗಳಿಗೆ ಇಂಗುಗುAಡಿ ನಿರ್ಮಿಸುವಂತೆ ಸೂಚನೆ ನೀಡಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಭಾರವನ್ನೂ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದಡಿ ಒಂದು ಸಾವಿರಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ 547 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿದ್ದು, 135 ಕಾಮಗಾರಿಗಳನ್ನು ಈಗಾಗಲೆ ಪ್ರಾರಂಭಿಸಲಾಗಿದೆ. ಬಾಕಿ ಕಾಮಗಾರಿಗಳಿಗೆ ಏಪ್ರಿಲ್ 22 ರ ಒಳಗಾಗಿ ಕ್ರಿಯಾಯೋಜನೆ ರೂಪಿಸಿ, ಅನುಮೋದನೆ ನೀಡಲಾಗುವುದು ಎಂದರು.ಉದ್ಯೋಗಖಾತ್ರಿಯಡಿ ಅಡಿಕೆ ಬೆಳೆ ಸೇರ್ಪಡೆ : ಉದ್ಯೋಗಖಾತ್ರಿ ಯೋಜನೆಯಡಿ ಕಳೆದ ವರ್ಷ 131.75 ಕೋಟಿ ರೂ. ಗಳ ವೆಚ್ಚದಲ್ಲಿ 33.51 ಲಕ್ಷ ಮಾನವದಿನಗಳನ್ನು ಸೃಜಿಸಿ ಕೂಲಿಕಾರರಿಗೆ ಉದ್ಯೋಗ ನೀಡಲಾಗಿದೆ. ವಿವಿಧ ತೋಟಗಾರಿಕೆ ಬೆಳೆಗಳಿಗೆ ನರೇಗಾದಡಿ ಕನ್ವರ್ಜೆನ್ಸ್ ಮಾಡಿಕೊಳ್ಳಲು ಅವಕಾಶ ನೀಡಿದಂತೆಯೇ, ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕಿಗೆ ಮಾತ್ರ ಅಡಿಕೆ ಬೆಳೆಗೂ ಅವಕಾಶವನ್ನು ಸರ್ಕಾರ ಕಳೆದವರ್ಷ ನೀಡಿದೆ. ಮಲೆನಾಡು ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವ ತಾಲ್ಲೂಕುಗಳಿಗೆ ಮಾತ್ರ ಅಡಿಕೆ ಬೆಳೆ ಸೇರ್ಪಡೆಗೆ ಅವಕಾಶವಿದೆ ಎಂಬ ಕಾರಣ ನೀಡಿ, ಇಡೀ ಜಿಲ್ಲೆಗೆ ವಿಸ್ತರಣೆ ಮಾಡುವಂತೆ ಕೋರಿದ ಪ್ರಸ್ತಾವನೆ ತಿರಸ್ಕೃತಗೊಂಡಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಆನಂದ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಜಿಲ್ಲೆಯ ದಾವಣಗೆರೆ ಮತ್ತು ಹರಿಹರ ತಾಲ್ಲೂಕು ಅಲ್ಲದೆ ಜಗಳೂರು ತಾಲ್ಲೂಕಿನಲ್ಲಿಯೂ ಅಡಿಕೆ ಬೆಳೆಗಾರರು ಹೆಚ್ಚಾಗಿದ್ದಾರೆ. ಹೀಗಾಗಿ ಇಡೀ ಜಿಲ್ಲೆಗೆ ಉದ್ಯೋಗಖಾತ್ರಿಯಡಿ ಅಡಿಕೆ ಬೆಳೆಗಾರರಿಗೆ ಅವಕಾಶ ಮಾಡಿಕೊಡಲು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಅನುಮತಿ ಕೊಡಿಸಲು ಪ್ರಯತ್ನಿಸಲಾಗುವುದು. ಪ್ರಧಾನಮಂತ್ರಿ ಫಸಲ್‌ಬೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಕನಿಷ್ಟ 1 ಲಕ್ಷ ರೈತರನ್ನು ವಿಮಾ ವ್ಯಾಪ್ತಿಗೆ ಸೇರಿಸಬೇಕು, ಈ ದಿಸೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ  ಉತ್ತರಿಸಿ, ಹಂದಿಗಳ ಸ್ಥಳಾಂತರಕ್ಕಾಗಿ ಹೆಬ್ಬಾಳು ಬಳಿ 7 ಎಕರೆ ಜಾಗ ಗುರುತಿಸಿದ್ದು, ಜಾಗದ ಹಸ್ತಾಂತರ ಪ್ರಕ್ರಿಯೆ ಜಾರಿಯಲ್ಲಿದೆ. ಅಲ್ಲದೆ ಹಂದಿಗಳನ್ನು ಸ್ಥಳಾಂತರಿಸುವ ಜಾಗಕ್ಕೆ ಕಾಂಪೌAಡ್ ನಿರ್ಮಾಣಕ್ಕೆ ಅಂದಾಜುಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಸಿಕಸ, ಒಣಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಕಾರ್ಯ ಜಾರಿಗೆ ತರಲಾಗಿದ್ದು, ಹಂದಿಗಳನ್ನು ಸ್ಥಳಾಂತರಿಸುವ ಪ್ರದೇಶಕ್ಕೆ ಹಸಿಕಸವನ್ನು ಪಾಲಿಕೆಯಿಂದಲೇ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಹೊಸದಾಗಿ 2.80 ಕೋಟಿ ರೂ. ಗಳ ವೆಚ್ಚದಲ್ಲಿ 13 ಆಟೋಟಿಪ್ಪರ್, ಬ್ಯಾಟರಿ ಚಾಲಿತ 13 ಆಟೋಟಿಪ್ಪರ್, 2 ಟ್ಯಾಕ್ಟರ್, 2 ಟಿಪ್ಪರ್‌ಟ್ರಕ್, 2 ಸ್ಕಿಡ್ ಸ್ಟೀರ್ ಲೋಡರ್‌ಗಳನ್ನು ಖರೀದಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಎಲ್ಲ ವಾಹನಗಳು ಸರಬರಾಜಾದಲ್ಲಿ, ನಗರ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ನಿತ್ಯವೂ ಹಸಿಕಸ ಹಾಗೂ ವಾರಕ್ಕೆ 3 ದಿನ ಒಣಕಸ ಸಂಗ್ರಹಿಸುವ ಕಾರ್ಯ ಜಾರಿಗೆ ತರಲಾಗುವುದು ಎಂದರು. ಸಭೆಯಲ್ಲಿ  ಶಾಸಕ ಪ್ರೊ. ಲಿಂಗಣ್ಣ, ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ, ದಿಶಾ ಸಮಿತಿ ಸದಸ್ಯರುಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.