ಜಲಮೂಲಗಳ ಸಂರಕ್ಷಣೆ ಅಗತ್ಯ : ಗ್ರಾ.ಪಂ.ಪಿಡಿಓ ಕನಕಪ್ಪ

ಗಂಗಾವತಿ:ಏ.30- ಗ್ರಾಮೀಣಾ ಪ್ರದೇಶಗಳಲ್ಲಿ ಜಲಮೂಲಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಜಲಶಕ್ತಿ ಅಭಿಯಾನ ನಡೆಸುತ್ತಿದೆ ಎಂದು ಆಗೋಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕನಕಪ್ಪ ಹೇಳಿದರು.
ತಾಲ್ಲೂಕಿನ ಆಗೋಲಿ ಗ್ರಾ.ಪಂ ವ್ಯಾಪ್ತಿಯ ವಿಠಲಾಪುರ ಕೆರೆಯಲ್ಲಿ ಗುರುವಾರ ದುಡಿಯೋಣಾ ಬಾ ಹಾಗೂ ಜಲಶಕ್ತಿ ಅಭಿಯಾನದಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿನ ಆಚರಿಸಿ ಅವರು ಮಾತನಾಡಿದರು. ಏ.1 ರಿಂದ ಸತತ ನೂರು ದಿನಗಳ ಕಾಲ ಈ ʻಕ್ಯಾಚ್ ದ ರೇನ್ʼ ಅಭಿಯಾನ ನಡೆಯಲಿದೆ. ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಗ್ರಾಮದಲ್ಲಿನ ಕೆರೆಗಳು, ನಾಲಾ ಹೂಳೆತ್ತುವುದು, ಬಚ್ಚಲುಗುಂಡಿ ನಿರ್ಮಾಣ, ಕೃಷಿಹೊಂಡ, ಬದು ನಿರ್ಮಾಣ, ಅರಣ್ಯೀಕರಣ ಕಾಮಗಾರಿಗಳು ನಡೆಸಲು ಈ ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಮಳೆ ನೀರನ್ನು ಭೂಮಿಗೆ ಇಂಗಿಸುವ ಕೆಲಸ ಮಾಡಬೇಕು ಎಂದರು.
ನಂತರ ತಾಲ್ಲೂಕು ಐಇಸಿ ಸಂಯೋಜಕರಾದ ಶಿವಕುಮಾರ್ ಕೆ ಮಾತನಾಡಿ, ದುಡಿಯೋಣಾ ಬಾ ಹಾಗೂ ಜಲಶಕ್ತಿ ಅಭಿಯಾನದ ಕುರಿತು ಕೂಲಿಕಾರರಿಗೆ ಮಾಹಿತಿಯನ್ನು ನೀಡಿ, ಕೆಲಸ ಮಾಡುವ ಸ್ಥಳದಲ್ಲಿ ಕೂಲಿಕಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಜಾಗೃತಿ ಮೂಡಿಸಿದರು.
ಈ ವೇಳೆ ಆಗೋಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ, ಸದಸ್ಯರಾದ ರಾಮಣ್ಣ, ನಿಂಗಪ್ಪ, ದೇವೆಂದ್ರಗೌಡ, ದೇವಪ್ಪ ಹಾಗೂ ಗ್ರಾ.ಪಂ ಡಿಇಓ ಮಂಜುನಾಥ ಸೇರಿದಂತೆ ಕಾಯಕಬಂಧುಗಳು ಇದ್ದರು.