ಜಲಮೂಲಗಳ ಸಂರಕ್ಷಣೆಗೆ ಕರೆ


ಬ್ಯಾಡಗಿ,ಮಾ.27: ಗ್ರಾಮದ ಜಲ ಮೂಲಗಳನ್ನು ಸಂರಕ್ಷಿಸಿ ಭವಿಷ್ಯದಲ್ಲಿ ಜರುಗುವ ಅನಾಹುತಗಳನ್ನು ತಪ್ಪಿಸುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಿ ಕೃಷಿ ಭೂಮಿ ತೇವಾಂಶ ಹೆಚ್ಚಿಸಿಕೊಳ್ಳುವಂತೆ ರಾಣೆಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಇಒ ಎಸ್.ಡಿ.ಬಳಿಗಾರ ಕರೆ ನೀಡಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಭಾವಿಹಳ್ಳದಲ್ಲಿ ಬಿಸಲಹಳ್ಳಿ ಗ್ರಾಮ ಪಂಚಾಯತಿ, ರಾಣೆಬೆನ್ನೂರಿನ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಕೂಲಿ ಕಾರ್ಮಿಕರ ಸಂಘಟನೆಗಳ ಸಹಯೋಗದಲ್ಲಿ ನರೇಗಾ ಯೋಜನೆಯಡಿಯಲ್ಲಿ ಹಳ್ಳ ಹೂಳೆತ್ತುವ ಕಾರ್ಮಿಕರೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಪ್ರಕೃತಿ ಹಾಗೂ ಹವಾಮಾನ ಬದಲಾವಣೆಗಳಿಂದ ಪರಿಸರದಲ್ಲಿ ಏರುಪೇರುಗಳಾಗುತ್ತಿದ್ದು. ಇಂದಿನ ಪೀಳಿಗೆಯವರು ಇದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಅಧಿನಿಯಮದ ಮೂಲಕ ಕೆರೆಗಳ ಅಭಿವೃದ್ಧಿ ಭೂಮಿಯ ಮೇಲಿನ ಮಣ್ಣು ನೀರು ಸಂರಕ್ಷಣೆ, ಹೊಂಡಗಳು,ಗೋಕಟ್ಟೆ ಅರಣ್ಯ ಪ್ರದೇಶಗಳ ಅಭಿವೃದ್ಧಿಯಂತಹ ಕಾರ್ಯಕ್ರಮಗಳಿಂದ ಮಾತ್ರ ಸಂರಕ್ಷಣೆ ಸಾಧ್ಯ. ಸಮುದಾಯಗಳು ಹೆಚ್ಚು ಹೆಚ್ಚಾಗಿ ಇಂತಹ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಜಲ ಮೂಲಗಳನ್ನು ಸಂರಕ್ಷಿಸಿ ಭವಿಷ್ಯದಲ್ಲಿ ಜರುಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಸಂಸ್ಥೆಯ ಮಂಜುನಾಥ ಬಿದರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹಾವನೂರ ಸ್ವಾಗತಿಸಿ ನಿರೂಪಿಸಿದರು. ಕಾರ್ಮಿಕ ಮುಖಂಡರಾದ ಹನುಮಂತಪ್ಪ ಕೊಲ್ಲಾಪುರ, ದುರ್ಗಪ್ಪ ದೊಡ್ಡಮನಿ, ಪರಸಪ್ಪ ಗಟ್ಟಿಮನಿ, ರತ್ನವ್ವ ದೊಡ್ಡಮನಿ, ಪುಟ್ಟಪ್ಪ ಗಟ್ಟಿಮನಿ, ಬಸವಂತಪ್ಪ ದೊಡ್ಡಮನಿ ಸೇರಿದಂತೆ 30ಕ್ಕೂ ಹೆಚ್ಚು ಜನ ಕಾರ್ಮಿಕರು ಹಳ್ಳ ಹೂಳೆತ್ತುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.