ಜಲಧಾರೆ ಯೋಜನೆಯನ್ನು ಜಲ ಜೀವನ್ ಮಿಷನ್ ಯೋಜನೆ ಅಡಿ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ

ವಿಜಯಪುರ, ಮೇ.28-ವಿಜಯಪುರ ಜಿಲ್ಲೆಯ 12 ನಗರ ಪ್ರದೇಶಗಳು ಮತ್ತು ಗ್ರಾಮೀಣ ಭಾಗದ 1035 ಜನವಸತಿಗಳಿಗೆ ಕುಡಿಯುವ ನೀರನ್ನು ಕಲ್ಪಿಸಲು ಅಂದಾಜು ರೂ 2385.51 ಕೋಟಿಗಳಲ್ಲಿ ಮಹತ್ವಾಕಾಂಕ್ಷಿ ಜಲಧಾರೆ ಯೋಜನೆಯನ್ನು ಜಲ್ ಜೀವನ್ ಮಿಷನ್ ಅಡಿಯಲ್ಲಿ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ.
ಕುಡಿಯುವ ನೀರಿನ ಯೋಜನೆ ಜಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಗ್ರಾಮಗಳು ಹಾಗೂ ಪಟ್ಟಣಗಳಿಗೆ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಬರದ ಜಿಲ್ಲೆಯ ಗ್ರಾಮಗಳು ಮತ್ತು ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಜನ ವಸತಿಗಳಿಗೆ 55. ಎಲ್.ಪಿ.ಸಿಡಿ ಯಂತೆ ಹಾಗೂ ನಗರ ಸ್ಥಳೀಯ ಪಟ್ಟಣಗಳಿಗೆ 135 ಎಲ್ ಪಿಸಿಡಿ ಗುಣಮಟ್ಟದ ನೀರು ಪೂರೈಸಲು ತೀರ್ಮಾನಿಸಲಾಗಿದೆ.
ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, 30 ತಿಂಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.
ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ ಸ್ಕೀಮ್-1ರಲ್ಲಿ ಅಂದಾಜು ರೂ 1431.48 ಕೋಟಿಗಳಲ್ಲಿ ಜಾರಿಗೊಳ್ಳಲಿದೆ. ಇದರಿಂದ ಬಸವನಬಾಗೇವಾಡಿ, ವಿಜಯಪುರ (ವಿಜಯಪುರ ನಗರ ಹೊರತುಪಡಿಸಿ) ಮತ್ತು ಇಂಡಿ ತಾಲೂಕಿನ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಆಗಲಿದೆ, ನಾರಾಯಣಪೂರ ಅಣೆಕಟ್ಟಿನ ಹಿನ್ನೀರಿನಿಂದ ಸ್ಕೀಮ್-2 ರಲ್ಲಿ ಅಂದಾಜು 954.51 ಕೋಟಿಗಳಲ್ಲಿ ಜಾರಿಗೊಳ್ಳಲಿದೆ. ಇದರಿಂದ ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕಿನ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ನೀರು ಸರಬರಾಜು ಆಗಲಿದೆ.
ಈ ಮಹತ್ವಾಕಾಂಕ್ಷಿ ಜಲಧಾರೆ ಕುಡಿಯುವ ನೀರಿನ ಯೋಜನೆಯನ್ನು ಜಲಜೀವನ್ ಮಿಷನ್ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.