ಜಲಜೀವನ ಯೋಜನೆ ಕಾಮಗಾರಿ ಪರಿಶೀಲನೆ

ದೇವದುರ್ಗ.ನ.೨೪- ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಜಲಜೀವನ ಯೋಜನೆ ಕಾಮಗಾರಿ ಪರಿಶೀಲನೆಗೆ ಜಿಪಂ ಸಿಇಒ ಶಶಿಧರ್ ಕುರೇರ್ ತಾಲೂಕಿನ ವಿವಿಧ ಗ್ರಾಪಂಗೆ ಭೇಟಿನೀಡಿ ಪರಿಶೀಲಿಸಿದರು.
ಗಬ್ಬೂರು, ನಾಗಡದಿನ್ನಿ, ಜಾಗೀರ್ ಜಾಡಲದಿನ್ನಿ, ಹೆಗ್ಗಡದಿನ್ನಿ ಗ್ರಾಮಗಳಿಗೆ ಭೇಟಿನೀಡಿದ ಸಿಇಒ ಗ್ರಾಮದ ಕೆಲ ಮನೆಗಳಿಗೆ ಭೇಟಿನೀಡಿ ಜಲಜೀವನ ಯೋಜನೆಯಡಿ ಕೂಡಿಸಿದ ಕುಡಿವ ನೀರಿನ ನಲ್ಲಿ, ಮೀಟರ್ ಪರಿಶೀಲಿಸಿದರು. ಬಳಿಕ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿ ಪರಿಶೀಲಿಸಿದರು. ನಾಗಡದಿನ್ನಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಪರಿಶೀಲನೆ ನಡೆಸಿ, ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಾತನಾಡಿ, ಹನಿಹನಿ ನೀರಿಗೂ ಮಹತ್ವವಿದ್ದು, ಬೇಸಿಗೆ ಸಂದರ್ಭದಲ್ಲಿ ಇದರ ಬೆಲೆ ಗೊತ್ತಾಗಲಿದೆ. ಪ್ರತಿಯೊಂದು ಹಳ್ಳಿಯ ಮನೆಮನೆಗೆ ಶುದ್ಧ ಕುಡಿವ ನೀರು ಒದಗಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜಲಜೀವನ ಯೋಜನೆ ಜಾರಿಗೊಳಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಗುತ್ತಿಗೆದಾರರು ಉಳಿದ ಕಾಮಗಾರಿ ಬೇಗ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ನಮ್ಮ ಜಿಲ್ಲೆಯಲ್ಲಿ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದು, ಗ್ರಾಮೀಣ ಭಾಗದ ಜನರಿಗೆ ಗುಳೆ ತಪ್ಪಿಸಲು ಉದ್ಯೋಗ ನೀಡಲಾಗುತ್ತಿದೆ ಎಂದರು.
ಜಿಪಂ ಎಇಇ ವೆಂಕಟೇಶ ಗಲಗ, ತಾಪಂ ಪಂಪಾಪತಿ ಹಿರೇಮಠ, ತಾಪಂ ಎಡಿ ಬಸಣ್ಣ ನಾಯಕ, ಪಿಡಿಒ ರಘುನಂದನ್ ಪುಜಾರಿ, ತಾಪಂ ಜೆಇ ಅಲ್ಲಾಭಕ್ಷಿ, ಜಗದೀಶ, ಗ್ರಾಮಸ್ಥರಾದ ಕೆ.ಶರಣಗೌಡ, ಶಿವು ನೀಲಗಲ್, ಶರಣಬಸವ, ರಂಗಪ್ಪ, ಶರಣಪ್ಪ ಇತರರಿದ್ದರು.