ಜಲಜೀವನ ಮಿಷನ್ : ಸಂಚಾರಿ ವಾಹನ ಮೂಲಕ ಜಾಗೃತಿ

ಬಾಗಲಕೋಟೆ: ಮಾ26: ಜಲ ಜೀವನ ಮಿಷನ್ ಯೋಜನೆಯಡಿ ಜಿಲ್ಲೆಯಾದ್ಯಂತ 30 ದಿನಗಳ ವರಗೆ ಹಮ್ಮಿಕೊಂಡ ಸಂಚಾರಿ ವಾಹನದ ಮೂಲಕ ಕಿರು ಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲ ಜೀವನ ಮಿಷನ್ ಕುರಿತು ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸಲು ಕಿರುಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಈ ಬಗ್ಗೆ ಮಾರ್ಚ 25 ರಿಂದ ಏಪ್ರೀಲ್ 23 ವರೆಗೆ ಜಿಲ್ಲೆಯಾದ್ಯಂತ ಸಂಚರಿಸಿ ಜನಸಂದನಿ ಇರುವ ಸ್ಥಳಗಳಲ್ಲಿ ಸಂಚಾರಿ ವಾಹನದ ಮೂಲಕ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರತಿ ವ್ಯಕ್ತಿಗೆ 55 ಲೀಟರನಂತೆ ಕುಟುಂಬದ ಎಲ್ಲ ಸದಸ್ಯರಿಗೆ ಅನುಗುಣವಾಗಿ ನಲ್ಲಿ ನೀರಿನ ಸಂಪರ್ಕದ ಮೂಲಕ ಮನೆ ಮನೆಗೂ ಶುದ್ದ ಹಾಗೂ ಸುರಕ್ಷಿತ ಸಾಕಷ್ಟು ಮಟ್ಟದಲ್ಲಿ ಪೈಪ್ ಸಂಪರ್ಕ ಕಲ್ಪಿಸುವ ಮೂಲಕ ನೀರನ್ನು ಪೂರೈಸುವ ಯೋಜನೆ ಇದಾಗಿದೆ. ಗ್ರಾಮೀಣ ಜನರಲ್ಲಿ ನೀರಿನ ಪ್ರಾಮುಖ್ಯತೆಯ ಪ್ರಜ್ಞೆ ಕುರಿತು ಜಾಗೃತಿ ಮೂಡಿಸಿ ಮಳೆ ನೀರು ಕೋಯ್ಲಿ ಪದ್ದತಿಯನ್ನು ಗ್ರಾಮೀಣ ಮಟ್ಟದಲ್ಲಿ ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ವಿಲಾಸ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ ಜಲ ಮಿಷನ್ ಯೋಜನೆ ಕುರಿತು ಮಾರ್ಚ 25 ರಿಂದ ಎಪ್ರೀಲ್ 23 ವರೆಗೆ ಒಟ್ಟು 30 ದಿನಗಳ ಕಾಲ 120 ಪ್ರದರ್ಶನವನ್ನು ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 337 ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ರಾರಂಭದಲ್ಲಿ ಜಮಖಂಡಿ, ಮುಧೋಳ, ಬೀಳಗಿ, ಬಾದಾಮಿ, ಹುನಗುಂದ ತಾಲೂಕಿನಲ್ಲಿ ಕೊನೆಯಲ್ಲಿ ಬಾಗಲಕೋಟೆ ತಾಲೂಕಿನಲ್ಲಿ ಜಾಗೃತಿ ವಾಹನ ಸಂಚರಿಸಲಿದೆ.ಪ್ರತಿ ದಿನ 3 ಸಮುದಾಯದಲ್ಲಿ ಹಾಗೂ 3 ಶಾಲೆಗಳಲ್ಲಿ ಕಿರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಎನ್.ವಾಯ್.ಕುಂದರಗಿ, ಡಿವಾಯ್‍ಪಿಸಿಯ ಅಧಿಕಾರಿ ಜಾಸ್ಮೀನ್ ಕಿಲ್ಲೆದಾರ ಜಲ ಜೀವನ್ ಮಿಷನ್ ಯೋಜನಾ ವ್ಯವಸ್ಥಾಪಕ ಶ್ರೀನಿವಾಸ ವಾಲಿಕಾರ, ಜಿಲ್ಲಾ ಎಂ.ಐ.ಎಸ್ ಸಂಯೋಜಕ ಚೇತನ ವಿರಕ್ತಮಠ, ಅನುಷ್ಠಾನ ಸಂಸ್ಥೆಯ ವಿನ್ ಸೊಸೈಟಿಯ ಪ್ರತಿನಿಧಿ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.