ಜಲಜೀವನ್ ಮಿಷನ್ ಯೋಜನೆ ಜಾರಿಗೆ ಎಸ್‍ಯುಸಿಐ(ಸಿ) ವಿರೋಧ: ದಿವಾಕರ್

ಕಲಬುರಗಿ,ಜೂ.28: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾದ ಜಲಜೀವನ್ ಮಿಷನ್ ಕುರಿತು ಎಸ್‍ಯುಸಿಐ(ಸಿ) ಜಿಲ್ಲಾ ಸಮಿತಿ ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸಾವಿರಾರು ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡಿರುವ ಈ ಯೋಜನೆಯ ಅನುμÁ್ಠನ ರಾಜ್ಯದಾದ್ಯಂತ ನಡೆಯುತ್ತಿದೆ. ಸರ್ಕಾರಗಳ ಹಣದೊಂದಿಗೆ ಬಡಜನರಿಂದ ಪ್ರತಿ ಗ್ರಾಮದಲ್ಲಿಯೂ’ ಸಮುದಾಯವಂತಿಗೆಯ ಮೂಲಕ ಹಣ ಸಂಗ್ರಹಿಸಲಾಗುತ್ತದೆ ಹಾಗೂ ಇದರೊಂದಿಗೆ ‘ಹರ್ ಫರ್ ಜಲ್’ ಎಂದು ಹೇಳುತ್ತಾ ಪ್ರತಿಯೊಂದು ನಳಕ್ಕೂ ಮೀಟರ್ ಅಳವಡಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ವಿರೋಧಿಸಿದ್ದಾರೆ.
ಇನ್ನು ಮುಂದೆ ಕುಡಿಯುವ ನೀರು, ಮನೆಬಳಕೆ ನೀರು, ಜಾನುವಾರುಗಳಿಗೆ ನೀರು ಇತ್ಯಾದಿಗಳಿಗೆ ಅವಶ್ಯಕವಾಗಿ ಬಳಸುವ ನೀರಿಗೆ ದುಬಾರಿ ಬಿಲ್ ತೆರಬೇಕಾಗುತ್ತದೆ. ಸರ್ಕಾರಗಳು ಜನರಿಗೆ ನೀಡಬೇಕಾಗಿರುವ ಕನಿಷ್ಠ ಮೂಲಭೂತ ಅವಶ್ಯಕತೆಯಾದ ನೀರಿಗೂ ಸಹ ಮೀಟರ್ ಅಳವಡಿಸಿ ಹಣ ದೋಚುವ ಹುನ್ನಾರವನ್ನು ಮರೆಮಾಚಿ ಬಣ್ಣ ಬಣ್ಣದ ಪದಪುಂಜಗಳಿಂದ ವರ್ಣಿಸುತ್ತಾ ಯೋಜನೆಯನ್ನು ಜಾರಿಗೊಳಿಸುತ್ತಿವೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಕಳೆದ 75 ವರ್ಷಗಳಿಂದ ಈ ದೇಶವನ್ನು ಆಳುತ್ತಿರುವ ಸರ್ಕಾರಗಳು ಇಲ್ಲಿಯವರೆಗೂ ಮನುಷ್ಯನ ಕನಿಷ್ಠ ಅವಶ್ಯಕತೆಯಾದ ಕುಡಿಯುವ ನೀರನ್ನು ಒದಗಿಸದೇ ಇರುವುದು ದುರಂತಮಯ ವಿಷಯವಾಗಿದೆ. ಹಳ್ಳ, ಕೊಳ್ಳ, ಕೆರೆ, ಬಾವಿ, ನದಿ, ಕೊಳವೆಬಾವಿಗಳ ನೀರನ್ನು ಸಂಗ್ರಹಿಸಿ, ಶುದ್ಧೀಕರಿಸಿ ನೀರನ್ನು ನೀಡಬೇಕಾಗಿರುವುದು ಸರ್ಕಾರದ ಕನಿಷ್ಠ ಕರ್ತವ್ಯ. ಜನರಿಂದ ಸಂಗ್ರಹಿಸಲಾದ ತೆರಿಗೆ ಹಣವನ್ನು ಈ ಆದ್ಯತೆಗೆ ಬಳಸಿ ಶುಲ್ಕ ರಹಿತ ಅಥವಾ ಕನಿಷ್ಠ ಶುಲ್ಕ ಸಂಗ್ರಹಣೆಯ ಮೂಲಕ ಈ ಅತಿ ದೊಡ್ಡ ಪ್ರಜಾತಂತ್ರ ದೇಶದಲ್ಲಿ ಜನರಿಗೆ ನೀರನ್ನು ಈಗಾಗಲೇ ನೀಡಬೇಕಿತ್ತು. ಬಡಜನರು ಇದಕ್ಕೆ ದುಡ್ಡು ತೆರ ಬೇಕಾಗಿರುವುದು ಅತ್ಯಂತ ಖಂಡನೀಯ ಎಂದು ಅವರು ಆಕ್ಷೇಪಿಸಿದ್ದಾರೆ.
ಈಗಾಗಲೇ ಖಾಸಗೀಕರಣದ ನೀತಿಗಳಿಗೆ ತುತ್ತಾಗಿರುವ ಜನತೆ ಶಿಕ್ಷಣ, ಆರೋಗ್ಯ, ಅಡುಗೆ ಅನಿಲ ಹಾಗೂ ಇತರ ಕನಿಷ್ಠ ಅವಶ್ಯಕತೆಗಳ ದುಬಾರಿ ಶುಲ್ಕವನ್ನು ತೆರಲಾಗದೆ ಸಂಕಷ್ಟದಲ್ಲಿದ್ದು ಈಗ ನಳಗಳ ಮೀಟರ್ ಅಳವಡಿಕೆಯಿಂದ, ಬಾಯಾರಿಕೆಯಿಂದ ಕಂಗಾಲಾಗುವ ದುಸ್ಥಿತಿಗೆ ಬಲಿಯಾಗದೆ ಸರ್ಕಾರದ ಈ ಯೋಜನೆಯ ವಿರುದ್ಧ ಸಿಡಿದೆದ್ದು ಹೋರಾಟಕ್ಕೆ ಮುಂದೆ ಬರಬೇಕೆಂದು ಅವರು ಕರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣವಸೂಲಿಗೆ ದಾರಿ ಮಾಡಿಕೊಡುವ ಈ ಜಲಜೀವನ್ ಮಿಷನ್ ಯೋಜನೆಯನ್ನು ಕೈಬಿಟ್ಟು ಹಿಂದಿನಂತೆಯೇ ಜನರಿಗೆ ನೀರು ಸರಬರಾಜು ಮಾಡುವ ನೀತಿಯನ್ನು ಮುಂದುವರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.