ಜಲಜೀವನ್ ಮಿಷನ್ ಯೋಜನೆ ಜನತೆಗೆ ಆಸರೆ

ಗೌರಿಬಿದನೂರು,ಆ.೧೨- ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ವಿವಿದೆಡೆಗಳಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಅನುಮೋದನೆಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ತೊಂಡೇಬಾವಿ ಹೋಬಳಿಯ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಅನುದಾನವನ್ನು ಬಳಸಿಕೊಂಡು ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತೀ ಮನೆಯಲ್ಲಿ ಸಮರ್ಪಕವಾದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಪ್ರತೀ ಕುಟುಂಬದಲ್ಲಿ ಮಹಿಳೆಯರೇ ಪ್ರಧಾನ ಪಾತ್ರ ವಹಿಸಲಿದ್ದು, ಅವರ ಬವಣೆಯನ್ನು ಅರಿತು ಸರ್ಕಾರ ವಿನೂತನವಾದ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿಯಲ್ಲಿ ಗ್ರಾಮದಲ್ಲಿನ ಪ್ರತೀ ಮನೆಗೆ ಪೈಪ್ ಲೈನ್ ಮೂಲಕ ನೀರಿನ ಸಂಪರ್ಕ ನೀಡಿ ಮೀಟರ್ ಆಧಾರಿತ ನಳಗಳನ್ನು ಅಳವಡಿಸಿ ನೀರಿನ ಪೂರೈಕೆ ಮಾಡಲಾಗುತ್ತದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಈಗಾಗಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಕಾಮಗಾರಿ ನಡೆಯುವ ಹಂತದಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯರು ನಮ್ಮ ಗಮನಕ್ಕೆ ತರಬೇಕಾಗಿದೆ. ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲರೂ ಸಹಕರಿಸಬೇಕಾಗಿದೆ ಎಂದರು.
ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿನ ನೀರಿನ ಸಮಸ್ಯೆ ಪರಿಹಾರವಾಗಲಿದ್ದು, ಮಿತವಾಗಿ ನೀರನ್ನು ಬಳಕೆ ಮಾಡುವ ಅಭ್ಯಾಸವಾಗಿ ಅಂತರ್ಜಲ ಮಟ್ಟವನ್ನು ಕಾಪಾಡಲು ಸಹಕಾರಿಯಾಗಲಿದೆ. ಮುಂದಿನ ಪೀಳಿಗೆಗೆ ಅಗತ್ಯವಾಗಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಈ ಸತ್ಕಾರ್ಯಕ್ಕೆ ಸ್ಥಳೀಯರ ಸಹಕಾರ ಅಗತ್ಯವಾಗಿದ್ದು, ಮುಂದಿನ ೩-೪ ತಿಂಗಳಿನಲ್ಲಿ ಮನೆಮನೆಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ನಾರಾಯಣಪ್ಪ, ಇಂಜಿನಿಯರ್ ಆಂಜನೇಯಮೂರ್ತಿ, ನಾಗೇಶ್, ಮುಖಂಡರಾದ ಬಿ.ಪಿ.ಕೃಷ್ಣಮೂರ್ತಿ, ಜೆ.ಕಾಂತರಾಜು, ಕೆ.ವಿ.ಗೋಪಿ, ಬಿ.ಜಿ.ವೇಣುಗೋಪಾಲರೆಡ್ಡಿ, ಬಿ.ವಿ.ಗೋಪಿನಾಥ್, ಶ್ರೀನಿವಾಸಗೌಡ, ಜಾಮಿನ್ ರಜಾ, ಮುನೋಜಿರಾವ್, ಫಯಾಜ್ ಅಬ್ಬಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.