ಜಲಜೀವನ್ ಮಿಷನ್ ಯೋಜನೆಯಡಿ ೧೪೩ ಕೋ.ರೂ. ವೆಚ್ಚದಲ್ಲಿ ಕಾಮಗಾರಿ


ಉಡುಪಿ, ಜ.೧- ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ೧೪೩ ಕೋಟಿ ರೂ ಮೊತ್ತದಲ್ಲಿ ೩೯೧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ನವೀನ್ ಭಟ್ ಹೇಳಿದರು.
ಅವರು ಗುರುವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಉಡುಪಿ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯಿದ್ದು, ಇದಕ್ಕಾಗಿ ಈ ಮೊದಲು ೨೩೬ ಕೋಟಿ ರೂ. ವೆಚ್ಚದಲ್ಲಿ ೮೪೩ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ವಾರಾಹಿಯಿಂದ ಉಡುಪಿಗೆ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನವಾಗುವ ಹಿನ್ನಲೆಯಲ್ಲಿ ಹಾಗೂ ಇತರೆ ನೀರು ಸರಬರಾಜು ಯೋಜನೆಗಳು ಅನುಷ್ಠಾನವಾಗುತ್ತಿರುವ ಹಿನ್ನಲೆಯಲ್ಲಿ ಪರಿಷ್ಕೃತ ಯೋಜನೆ ಸಿದ್ಧಪಡಿಸಿದ್ದು, ಇದರಲ್ಲಿ ೧೪೩ ಕೋಟಿ ರೂ. ವೆಚ್ಚದಲ್ಲಿ ೩೯೧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು” ಎಂದು ಡಾ. ನವೀನ್ ಭಟ್ ತಿಳಿಸಿದರು. ಪರಿಷ್ಕೃತ ಯೋಜನೆಯಲ್ಲಿ ಕಾರ್ಕಳ ತಾಲೂಕಿನ ೩೪ ಗ್ರಾಮ ಪಂಚಾಯತ್‌ಗಳ ೫೦ ಗ್ರಾಮಗಳಲ್ಲಿ, ಕುಂದಾಪುರ ತಾಲೂಕಿನ ೨೩ ಗ್ರಾಮ ಪಂಚಾಯತ್‌ಗಳ ೩೫ ಗ್ರಾಮಗಳಲ್ಲಿ, ಉಡುಪಿ ತಾಲೂಕಿನ ೩೩ ಗ್ರಾಮ ಪಂಚಾಯತ್‌ಗಳ ೫೫ ಗ್ರಾಮಗಳು ಸೇರಿದಂತೆ ಒಟ್ಟು ೯೦ ಗ್ರಾಮ ಪಂಚಾಯತ್‌ಗಳ ೧೪೦ ಗ್ರಾಮಗಳಲ್ಲಿ ೩೯೧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ” ಎಂದು ಹೇಳಿದರು. ಸಭೆಯಲ್ಲಿ, ಜಲ ಜೀವನ್ ಮಿಷನ್ ಯೋಜನೆಯಡಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ೩೮೨.೨ ಕೋಟಿ ರೂ ವೆಚ್ಚದ ಕಾಮಗಾರಿ ಕೈಗೊಳ್ಳಲು, ಎರ್ಲಪಾಡಿ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ೯೮೧.೨೦ ಲಕ್ಷ ರೂ ವೆಚ್ಚದ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆಗಳನ್ನು ಅನುಮೋದನೆಗೆ ಸಲ್ಲಿಸಲು ಮತ್ತು ಉಡುಪಿ ತಾಲೂಕಿನ ೮೦ ಬಡಗಬೆಟ್ಟು ಗ್ರಾ.ಪಂ. ಗೆ ಮಂಜೂರಾಗಿರುವ ೬೩.೩೯ ಲಕ್ಷ ಹಾಗೂ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾ.ಪಂ.ಗೆ ಮಂಜೂರಾಗಿರುವ ೬೭.೫೯ ಲಕ್ಷದ ಎಫ್.ಎಸ್.ಎಂ ಯೋಜನೆಗಳಿಗೆ ಅಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ರಾಜ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.