ಜಲಜೀವನ್ ಮಿಷನ್ ಕಾಮಗಾರಿ ಕಳಪೆ: ಮಾ. 28ರಂದು ಜಲಮಂಡಳಿ ಮುಂದೆ ಖಾಲಿಕೊಡಗಳೊಂದಿಗೆ ಧರಣಿ

ಕಲಬುರಗಿ:ಮಾ.25: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮತ್ತು ರಟಕಲ್ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಕಳಪೆಯಾಗಿದ್ದು ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾರ್ಚ್ 28ರಂದು ಜಲ ಮಂಡಳಿ ಕಚೇರಿ ಮುಂದೆ ಅಪರಾಹ್ನ 12 ಗಂಟೆಗೆ ಖಾಲಿ ಕೊಡಗಳೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಕಾಮಗಾರಿ ಮಾಡಿದವರ ಬಿಲ್ ತಡೆ ಹಿಡಿದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಗುತ್ತಿಗೆದಾರರ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪುನ: ಸರ್ಕಾರದ ಹಣ ಮರಳಿ ಸರ್ಕಾರಕ್ಕೆ ವಸೂಲಿ ಮಾಡುವಂತೆ ಒತ್ತಾಯಿಸಿದರು.
ಜಲಜೀವನ್ ಮಿಷನ್ ಯೋಜನೆಯನ್ನು ಖಾಸಗೀಕರಣ ಹಿಂಬಾಗಿಲಿನಿಂದ ಜಾರಿಗೆ ತರಲಾಗುತ್ತಿದೆ. ಯೋಜನೆ ಪ್ರತಿ ಮನೆಗೆ ನೀರು ಪೂರೈಸಲು ಪ್ರತಿ ನಳಕ್ಕೆ ಮೀಟರ್ ಅಳವಡಿಸಿ ಒಂದು ಮನೆಗೆ ಒಂದು ನಳಕ್ಕೆ 55 ಲೀಟರ್ ನೀರು ಮಾತ್ರ ಉಚಿತವಾಗಿ ಕೊಡಲಾಗುತ್ತದೆ. ಮಿಕ್ಕ ನೀರನ್ನು ಖರೀದಿಸಬೇಕಾಗುತ್ತದೆ. ರೈತರ ಮನೆಗಳಲ್ಲಿ ಎಮ್ಮೆಗಳು, ಕೋಳಿಗಳು, ನಾಯಿಗಳು, ಹಂದಿಗಳು ಸೇರಿದಂತೆ ಅನೇಕ ಜಾನುವಾರುಗಳಿವೆ. ಒಂದು ಎಮ್ಮೆ ದಿನಕ್ಕೆ 60 ಲೀಟರ್ ನೀರು ಕುಡಿಯುತ್ತಿದೆ. ಒಂದು ಎತ್ತು 36 ಲೀಟರ್ ನೀರು ಒಂದು ಸಮಯದಲ್ಲಿ ಕುಡಿಯುತ್ತದೆ. ಒಟ್ಟು ಮೂರು ಬಾರಿ ನೀರು ದಿನ ಕರುಗಳಿಗೆ ಸರಿ ಹೋಗುವುದಿಲ್ಲ. ಹೀಗಾಗಿ ಮೀಟರ್ ಕೂಡಿಸುವ ಮೂಲಕ ರೈತರಿಂದ ನೀರಿನ ಹೆಸರಿನಲ್ಲಿ ಹಣ ವಸೂಲು ಮಾಡುವುದು ಸುಲಿಗೆಗೆ ಸಮಾನವಾಗುತ್ತದೆ ಎಂದು ಅವರು ಕಟುವಾಗಿ ಟೀಕಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಹಣ ಖರ್ಚು ಆದರೂ ಸಹ ಜನರಿಗೆ ನೀರು ಸಹ ಸಿಗುತ್ತಿಲ್ಲ. ಸಾವಿರಾರು ಕೋಟಿ ರೂ.ಗಳನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿದಂತಾಗಿದೆ. ಜಿಲ್ಲೆಯಲ್ಲಿ ಇದು ದೊಡ್ಡ ಭ್ರಷ್ಟಾಚಾರ ಹಾಗೂ ಹಗರಣವಾಗಿದೆ. ಈ ಕುರಿತು ಸಂಬಂಧಪಟ್ಟ ಅಭಿಯಂತರರು, ಕಾರ್ಯನಿರ್ವಾಹಕ ಅಭಿಯಂತರರು ಸಹ ಮೌನವಹಿಸಿದ್ದಾರೆ. ಈ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರವ ಒಂದು ಗ್ರಾಮಕ್ಕೆ 2 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಟೆಂಡರ್ ಕೂಡ ಕರೆಯಲಾಗಿದೆ. ಈಗಾಗಲೇ ಐದು ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಕಳಪೆ ಕಾಮಗಾರಿಯಾಗಿದೆ. ಕೆಲಸ ಮಾತ್ರ ಅಪೂರ್ಣವಾಗಿದೆ. ಸರ್ಕಾರದ ಹಣ ಎತ್ತಿ ಹಾಕುವ ಸಂಚು ರೂಪಿಸಿದ್ದು, ಕೂಡಲೇ ಅಂತಹ ಕಾಮಗಾರಿಗಳ ಬಿಲ್ ತಡೆಯಬೇಕು ಎಂದು ಅವರು ಆಗ್ರಹಿಸಿದರು.
ರಟಕಲ್ ಗ್ರಾಮ ಪಂಚಾಯಿತಿಯಲ್ಲಿ ಯೋಜನೆ ಜಾರಿಯಲ್ಲಿದ್ದು, ಕಳಪೆ ಕಾಮಗಾರಿಯಾಗಿದೆ. ಆದಾಗ್ಯೂ, ನೀರಿನ ಹಾಹಾಕಾರ ಹೆಚ್ಚಾಗಿದೆ. ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಬೇಕಾಬಿಟ್ಟಿ ಕೆಲಸ ಮಾಡಿದ್ದರಿಂದ ಕೂಡಲೇ ಆ ಬಿಲ್ ತಡೆದು ಸೂಕ್ತ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಒಟ್ಟು 261 ಗ್ರಾಮ ಪಂಚಾಯಿತಿಗಳಿದ್ದು, 1584 ಗ್ರಾಮಗಳಿವೆ. ಮೊದಲ ಹಂತದ ಟೆಂಡರ್ ಆಗಿ 500 ಗ್ರಾಮಗಳಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡನೇ ಹಂತದಲ್ಲಿ ಇರುವ ಕಾಮಗಾರಿ 250 ಗ್ರಾಮಗಳಲ್ಲಿ 500 ಕೋಟಿ ರೂ.ಗಳ ವೆಚ್ಚದಲ್ಲಿ ಟೆಂಡರ್ ಹಂತದಲ್ಲಿವೆ. ರಟಕಲ್ ಗ್ರಾಮ ಪಂಚಾಯಿತಿ 2.18 ಕೋಟಿ ರೂ.ಗಳು, ಅರಣಕಲ್ ಗ್ರಾಮ ಪಂಚಾಯಿತಿ 2, ವೇಕ್ಟಪುರ ಗ್ರಾಮ ಪಂಚಾಯಿತಿ, ಸಾಲೆ ಬೀರನಹಳ್ಳಿ, ಗಾರಂಪಳ್ಳಿ ಮುಂತಾದೆಡೆ ಕಳಪೆ ಮಟ್ಟದಲ್ಲಿದ್ದು, ಕೂಡಲೇ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸುಭಾಷ್ ಜೇವರ್ಗಿ, ಅಲ್ತಾಫ್ ಇನಾಂದಾರ್, ದಿಲೀಪಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ, ಎಂ.ಬಿ. ಸಜ್ಜನ್, ಜಾವೇದ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು.