ಜಲಕ್ಷಾಮ ನಗರಗಳ ಜಾಗತಿಕ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನ

ನವದೆಹಲಿ,ನ.2-ನೀರಿನ ಅಭಾವ ಎದುರಿಸುತ್ತಿರುವ ನಗರಗಳ ಜಾಗತಿಕ ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರು ಮಹಾನಗರ ಸ್ಥಾನ ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಶ್ವದ ನೀರಿನ ಅಭಾವ ಎದುರಿಸುತ್ತಿರುವ
ನೂರು ನಗರಗಳ ಪಟ್ಟಿಯಲ್ಲಿ ಭಾರತದ 30 ನಗರಗಳು ಸೇರಿದ್ದು ಇಲ್ಲಿ ಭೂಮಿ ಬಿಸಿಯಾಗುವುದನ್ನು ತಡೆಯಲು ಅಗತ್ಯ ತುರ್ತುಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಬ್ಲ್ಯೂಡಬ್ಲ್ಯೂಎಫ್‌ ಸಂಸ್ಥೆ ವರದಿ ಮಾಡಿದೆ.
2050ರ ವೆಳಗೆ ನೀರಿನ ಅಭಾವ ಎದುರಿಸುತ್ತಿರುವ ನಗರಗಳ ಸಂಖ್ಯೆ ಶೇ 51ಕ್ಕೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಾಗತಿಕ ತಾಪಮಾನ ಹಾಗೂ ಜಲಕ್ಷಾಮ ಕುರಿತು ಅಧ್ಯಯನ ಮಾಡುವ‌ ಡಬ್ಲ್ಯೂಡಬ್ಲ್ಯೂಎಫ್ ಸಂಸ್ಥೆಯು
ನೀರಿನ ಅಭಾವ ಎದುರಿಸುತ್ತಿರುವ ನೂರು ನಗರಗಳ ಜಾಗತಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದುಇದರಲ್ಲಿ ಬೆಂಗಳೂರು ಸೇರಿದಂತೆ ಭಾರತದ 30 ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಚೀನಾ ಸೇರಿದಂತೆ, ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ದೇಶಗಳ ನಗರಗಳು ನೀರಿನ ಆಹಾಕಾರದ ಹಾಟ್ ಸ್ಪಾಟ್‌ಗಳಾಗಿವೆ. ಬೀಜಿಂಗ್, ಜಕಾರ್ತಾ, ಜೋಹಾನ್ಸ್ ಬರ್ಗ್, ಇಸ್ತಾಂಬುಲ್, ಹಾಂಗ್ ಕಾಂಗ್, ಮೆಕ್ಕಾ ಮತ್ತು ರಿಯೊ ಡಿ ಜನೈರೊ ನಗರಗಳನ್ನು ಜಾಗತಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.
ಜೈಪುರ, ಇಂದೋರ್, ಅಮೃತಸರ, ಪುಣೆ, ಶ್ರೀನಗರ, ಕೋಲ್ಕತ್ತಾ, ಬೆಂಗಳೂರು, ಮುಂಬೈ, ಕೋಝಿಕೋಡ್ ಮತ್ತು ವಿಶಾಖಪಟ್ಟಣಂ ಸೇರಿದಂತೆ ಸುಮಾರು 30 ಭಾರತೀಯ ನಗರಗಳನ್ನು ಗುರುತಿಸಲಾಗಿದೆ. ಇಲ್ಲಿ ಮುಂದಿನ ಕೆಲವು ದಶಕಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಕಾರ್ಯಕ್ರಮ ನಿರ್ದೇಶಕ ಡಾ.ಸೆಜಲ್ ವೋರಾ ಅವರು, ‘ಭಾರತದ ಪರಿಸರದ ಭವಿಷ್ಯ ಅಲ್ಲಿನ ನಗರಗಳಲ್ಲಿಅಡಗಿದೆ. ಭಾರತ ವೇಗವಾಗಿ ನಗರೀಕರಣಕ್ಕೆ ಒಳಪಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗಬಹುದು. ಜಲಕ್ಷಾಮ ವಿಷವರ್ತುಲದಿಂದ ದೂರಸರಿಯಲು ನಗರಗಳಲ್ಲಿನ ಜಲಾನಯನ ಪ್ರದೇಶಗಳು ಮತ್ತಷ್ಟು ವಿಸ್ತಾರವಾಗಬೇಕಾದ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.