
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 2 :- ಜರ್ಮಲಿ ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಿಗಧಿಪಡಿಸಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹರವದಿ ಚನ್ನಮ್ಮರಾಮಪ್ಪ ಹಾಗೂ ಉಪಾಧ್ಯಕ್ಷರಾಗಿ ಪಾಪಕ್ಕ ಬಸವರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಮಪಂಚಾಯಿತಿ ಚುನಾವಣಾಧಿಕಾರಿಯಾಗಿರುವ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್ ಘೋಷಿಸಿದ್ದಾರೆ.
ಇಂದು ಬೆಳಿಗ್ಗೆ 10ಗಂಟೆಯಿಂದ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 13 ಸದಸ್ಯರ ಬಲಾಬಲ ಹೊಂದಿರುವ ಜರ್ಮಲಿ ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ ಮೀಸಲಾತಿಯಲ್ಲಿ ಹರವದಿ ಚನ್ನಮ್ಮರಾಮಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಪಾಪಕ್ಕಬಸವರಾಜ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದ್ದಾರೆ ಒಟ್ಟು 13 ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾಗಿ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್ ಸಹಾಯಕರಾಗಿ ಈಶಪ್ಪ, ವಾಸುದೇವ, ಕಂದಾಯ ನಿರೀಕ್ಷಕ ಚೌಡಪ್ಪ ಹಾಜರಿದ್ದು, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಯಾವುದೇ ಅಹಿತಕರ ಘಟನೆ ಜರುಗದಂತೆ ಗುಡೇಕೋಟೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಮುಖಂಡರುಗಳಾದ ಎಪಿಎಂಸಿ ಮಾಜಿ ಅಧ್ಯಕ್ಷ ಜರ್ಮಲಿ ಶಶಿಧರ, ಹರವದಿ ವೀರಣ್ಣ, ದ ಸಂ ಸ ಜಿಲ್ಲಾ ಸಂಘಟನಾ ಸಂಚಾಲಕ ಗೆದ್ದಲಗಟ್ಟೆ ಹನುಮೇಶ, ಗ್ರಾ ಪಂ ಮಾಜಿ ಅಧ್ಯಕ್ಷ ಎಸ್ ಗಂಗಾಧರ, ಹರವದಿ ತಿಮ್ಮಾರೆಡ್ಡಿ, ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಹೆಚ್ ನಾಗೇಂದ್ರಪ್ಪ, ಜರ್ಮಲಿ ಪಾಲಯ್ಯ, ಮಾಜಿ ಸದಸ್ಯ ಗೆದ್ದಲಗಟ್ಟೆ ಸಿದ್ದನಗೌಡ, ರಾಮಚಂದ್ರಪ್ಪ ಹರವದಿ ಹಾಗೂ ಇತರರಿದ್ದರು.