ಜರ್ಮನಿ: ಗಾಂಜಾ ಬೆಳೆಗೆ ಪ್ರೋತ್ಸಾಹ

ಬರ್ಲಿನ್, ಆ.೧೭- ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ವಿಚಾರದಲ್ಲಿ ಹಲವು ದೇಶಗಳು ಕಠಿಣ ಕಾನೂನು ಹೊಂದಿದ್ದರೆ ಇದೀಗ ಜರ್ಮನಿ ಮಾತ್ರ ಇಲ್ಲಿ ಕೊಂಚ ಸಡಿಲತೆ ಪ್ರದರ್ಶಿಸಿದೆ. ಅದರಂತೆ ಜರ್ಮನಿಯ ಸಂಪುಟ ಬುಧವಾರ ಮನರಂಜನೆಗೆ ಗಾಂಜಾ ಬಳಕೆ ಮತ್ತು ಕೃಷಿಯನ್ನು ಕಾನೂನುಬದ್ಧಗೊಳಿಸುವ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಿದೆ.
ಸದ್ಯ ಜರ್ಮನಿಯ ಗಾಂಜಾದ ಕುರಿತ ಕಾನೂನುಗಳನ್ನು ಉದಾರಗೊಳಿಸುವ ವಿಶ್ವದಾದ್ಯಂತ ಪ್ರವೃತ್ತಿಗೆ ಮತ್ತಷ್ಟು ವೇಗವನ್ನು ನೀಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೀಗ ಈ ಮಸೂದೆಯನ್ನು ಸಂಸತ್‌ನಲ್ಲಿ ಸರಕಾರ ಮಂಡಿಸಲಿದೆ. ಸಂಸತ್ ಅನುಮೋದನೆ ದೊರಕಿದರೆ ವಯಸ್ಕರು ತಮ್ಮ ಬಳಿ ೨೫ ಗ್ರಾಂನಷ್ಟು ಗಾಂಜಾ ಇರಿಸಿಕೊಳ್ಳಲು ಹಾಗೂ ಗರಿಷ್ಠ ೩ ಸಸ್ಯಗಳನ್ನು ಬೆಳೆಯಲು ಅಥವಾ ಮನರಂಜನಾ ಕ್ಲಬ್‌ಗಳಲ್ಲಿ ಗಾಂಜಾ ಬಳಸಲು ಅವಕಾಶ ದೊರೆಯಲಿದೆ. ಈ ಮಸೂದೆಗೆ ಕಾಯ್ದೆಯ ರೂಪ ದೊರೆತರೆ ಗಾಂಜ ಕಳ್ಳಸಾಗಣೆ ಜಾಲಕ್ಕೆ ಹೊಡೆತ ಬೀಳಲಿದೆ ಮತ್ತು ಕಲುಷಿತ ಗಾಂಜಾ ಬಳಕೆಯಿಂದ ಗ್ರಾಹಕರನ್ನು ರಕ್ಷಿಸುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲಿದೆ. ಈ ಮಸೂದೆಗೆ ಸಂಸತ್ ಅನುಮೋದನೆ ನೀಡಿದರೆ ಮಾದಕ ವಸ್ತು ಕುರಿತ ಅತ್ಯಂತ ಉದಾರ ನೀತಿ ಹೊಂದಿರುವ ಯುರೋಪ್ನ ದೇಶವಾಗಿ ಜರ್ಮನಿ ಗುರುತಿಸಿಕೊಳ್ಳಲಿದೆ. ಆದರೆ ಮಸೂದೆಯ ಬಗ್ಗೆ ವಿರೋಧ ಪಕ್ಷಗಳಿಂದ ಟೀಕೆ ಮತ್ತು ವಿರೋಧ ವ್ಯಕ್ತವಾಗಿದೆ.