ಜರ್ಮನಿಯಿಂದ ಉಕ್ರೇನ್‌ಗೆ ಸೇನಾ ನೆರವು

ಬರ್ಲಿನ್ (ಜರ್ಮನಿ), ಮೇ.೧೫- ರಷ್ಯಾದ ಪ್ರದೇಶಗಳ ಮೇಲೆ ನಮಗೆ ದಾಳಿ ನಡೆಸುವ ಯಾವುದೇ ಯೋಜನೆ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.
ಜರ್ಮನಿ ಭೇಟಿಯಲ್ಲಿರುವ ಝೆಲೆನ್ಸ್ಕಿ ನಿನ್ನೆ ಬರ್ಲಿನ್‌ನಲ್ಲಿ ದೊಡ್ಡ ಪ್ರಮಾಣದ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ನೆರವಿನ ಪ್ಯಾಕೇಜ್ ಪಡೆದುಕೊಂಡಿದೆ. ಈ ವೇಳೆ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಝೆಲೆನ್ಸ್ಕಿ, ರಷ್ಯಾ ಪ್ರದೇಶಗಳ ಮೇಲೆ ದಾಳಿ ನಡೆಸುವ ಯೋಜನೆಯಿಲ್ಲ. ಆದರೆ ರಷ್ಯಾ ಕಾನೂನುಬಾಹಿರವಾಗಿ ವಶಪಡಿಸಿಕೊಂಡ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳಲು ನಾವು ಪ್ರತಿದಾಳಿಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಜರ್ಮನಿ ಭೇಟಿಯು ಝೆಲೆನ್ಸ್ಕಿಗೆ ದೊಡ್ಡ ಮುನ್ನಡೆ ಒದಗಿಸಿದಂತಾಗಿದೆ. ಓಲಾಫ್ ಜೊತೆಗಿನ ಭೇಟಿಯ ಬಳಿಕ ಉಕ್ರೇನ್‌ಗೆ ಜರ್ಮನಿಯು ಸುಮಾರು ೨.೭ ಬಿಲಿಯನ್ ಯುರೋ ಮೌಲ್ಯದ ಶಸ್ತ್ರಾಸ್ತ್ರಗಳನ್ನು ನೀಡುವ ಯೋಜನೆ ಹಾಕಿಕೊಂಡಿದೆ. ಈ ನೆರವಿನ ಪ್ಯಾಕೇಜ್‌ನಲ್ಲಿ ವಿಶ್ವದ ಪ್ರಸಿದ್ಧ ಸೇನಾ ಟ್ಯಾಂಕ್‌ಗಳಲ್ಲಿ ಒಂದಾಗಿರುವ ಲೆಪಾರ್ಡ್ ಟ್ಯಾಂಕ್, ರಷ್ಯಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ರಕ್ಷಿಸಲು ಹೆಚ್ಚು ವಿಮಾನ ವಿರೋಧಿ ವ್ಯವಸ್ಥೆಗಳನ್ನು ಒಳಗೊಂಡಿದೆ. ಸದ್ಯ ಇದು ರಷ್ಯಾ ಜೊತೆಗಿನ ಯುದ್ದ ಆರಂಭವಾದ ಬಳಿಕ ಉಕ್ರೇನ್‌ಗೆ ಲಭಿಸಿದ ಅತೀ ದೊಡ್ಡ ನೆರವಿನ ಪ್ಯಾಕೇಜ್ ಎಂದು ಹೇಳಲಾಗಿದೆ. ಉಕ್ರೇನ್ ನಮ್ಮ ಭೂಭಾಗದ ಮೇಲೆ ಸತತವಾಗಿ ದಾಳಿ ನಡೆಸುತ್ತಿದ್ದು, ಇತ್ತೀಚಿಗೆ ಮಾಸ್ಕೋದ ಕ್ರೆಮ್ಲಿನ್ ಕಟ್ಟಡದ ಮೇಲೆ ಕೂಡ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಉಕ್ರೇನ್ ನಿರಾಕರಿಸುತ್ತಾ ಬಂದಿದೆ. ಇನ್ನು ರಷ್ಯಾ ಉಡಾವಣೆ ಮಾಡಿದ ೨೫ ಡ್ರೋನ್‌ಗಳು ಮತ್ತು ಮೂರು ಕ್ರೂಸ್ ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ. ಅಲ್ಲದೆ ಪೂರ್ವ ಡೊನೆಟ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ರಷ್ಯಾದ ಶೆಲ್ ದಾಳಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ೧೬ ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಖೆರ್ಸನ್ ಪ್ರದೇಶದ ಮೇಲೆ ಭಾನುವಾರ ನಡೆದ ರಷ್ಯಾದ ಫಿರಂಗಿ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಉಕ್ರೇನಿಯನ್ ಪಡೆಗಳಿಂದ ಹೆಚ್ಚಿದ ಶೆಲ್ ದಾಳಿಯಿಂದಾಗಿ ಪೂರ್ವ ಲುಹಾನ್ಸ್ಕ್ ಪ್ರದೇಶದ ರಷ್ಯಾದ ವಶಪಡಿಸಿಕೊಂಡ ಪ್ರದೇಶಗಳಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.