ಜರ್ಮನಿಗೆ ಆಘಾತಕಾರಿ ಸೋಲು ಜಪಾನ್‌ಗೆ ಗೆಲುವು

ದೋಹಾ (ಕತಾರ್), ನ.೨೩- ಈಗಾಗಲೇ ಅಚ್ಚರಿಯ ಫಲಿತಾಂಶದ ಮೂಲಕವೇ ಸುದ್ದಿಯಲ್ಲಿರುವ ಕತಾರ್ ವಿಶ್ವಕಪ್ ಫುಟ್ಬಾಲ್‌ನಲ್ಲಿ ಮತ್ತೊಂದು ಅನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ವಿಶ್ವಕಪ್‌ನ ಬಲಿಷ್ಠ ತಂಡಗಳ ಪೈಕಿ ಅಗ್ರಸ್ಥಾನದಲ್ಲಿರುವ ಜರ್ಮನಿ ವಿರುದ್ಧ ಏಶ್ಯನ್ ಚಾಂಪಿಯನ್ ತಂಡ ಜಪಾನ್ ೨-೧ರ ಅಂತರದ ಅಚ್ಚರಿಯ ಜಯ ಸಾಧಿಸುವ ಮೂಲಕ ಜಾಗತಿಕ ಫುಟ್ಬಾಲ್ ಜಗತ್ತನ್ನು ಮತ್ತೊಮ್ಮೆ ತನ್ನತ್ತ ಸೆಳೆದಿದೆ. ಜರ್ಮನಿಯ ಬಲಿಷ್ಠ ರಕ್ಷಣಾ ಕೋಟೆಯನ್ನೇ ಬೇಧಿಸಿ, ಗೆಲುವು ಸಾಧಿಸಿದ ಜಪಾನ್ ಆಟಕ್ಕೆ ಇದೀಗ ಜಾಗತಿಕ ವಲಯದಿಂದ ಮುಕ್ತಕಂಠದ ಪ್ರಶಂಸೆ ವ್ಯಕ್ತವಾಗಿದೆ.


ಈಗಾಗಲೇ ಅರ್ಜೆಂಟೀನಾ ವಿರುದ್ಧ ೨-೧ರ ಅಂತರದ ಅಚ್ಚರಿಯ ಗೆಲುವು ಸಾಧಿಸುವ ಮೂಲಕ ಸೌದಿ ಅರೇಬಿಯಾ ಎಲ್ಲರ ಗಮನ ಸೆಳೆದಿರುವ ನಡುವೆ ಇದೀಗ ಜಪಾನ್ ಕೂಡ ತಾನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಪ್ರದರ್ಶನ ನೀಡಿದೆ. ಇಲ್ಲಿನ ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಗುಂಪಿನ ಪಂದ್ಯದ ಆರಂಭದಿಂದ ಹಿಡಿದು ಅಂತ್ಯದ ವರೆಗೂ ಜರ್ಮನಿಯ ತನ್ನ ಕಲಾತ್ಮಕ ಅಟ ಪ್ರದರ್ಶಿಸಿದರೂ ಜಪಾನ್ ದಾಖಲಿಸಿದ ಎರಡು ಗೋಲುಗಳು ಎಲ್ಲರ ಲೆಕ್ಕಾಚಾರವನ್ನು ಬದಲಾಯಿಸಿತು. ಪ್ರಥಮಾರ್ಧದಿಂದಲೇ ಜರ್ಮನಿ ತನ್ನ ಕಲಾತ್ಮಕ ಪಾಸಿಂಗ್ ಹಾಗೂ ದಾಳಿಯ ಮೂಲಕ ಎದುರಾಳಿ ಜಪಾನ್ ಮೇಲೆ ಒತ್ತಡ ಹೇರಿತು. ಅಲ್ಲದೆ ಪಂದ್ಯದ ೩೩ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯನ್ನು ಜರ್ಮನಿಯ ಗುಂಡೋಗನ್ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಜರ್ಮನಿ ೧-೦ ಮುನ್ನಡೆ ಸಾಧಿಸಿತು. ಆದರೆ ಬಳಿಕ ಪ್ರಥಮಾರ್ಧದಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಅಲ್ಲದೆ ದ್ವಿತೀಯಾರ್ಧದಲ್ಲೂ ಗೋಲುಗಳ ಬೇಟೆ ಮುಂದುವರೆದರೂ ಎರಡೂ ತಂಡಗಳು ವಿಫಲತೆ ಕಂಡವು. ಆದರೂ ಜರ್ಮನಿ ಅದ್ವುತ ಆಟ ಮಾತ್ರ ಎಲ್ಲರ ಮನಗೆದ್ದಿತು. ಈ ವೇಳೆ ಹಲವು ಬಾರಿ ಗೋಲಿಗಾಗಿ ಜರ್ಮನಿ ನಡೆಸಿದ ದಾಳಿಯನ್ನು ಜಪಾನ್ ಗೋಲ್‌ಕೀಪರ್ ಅದ್ಬುತ ರೀತಿಯಲ್ಲಿ ತಡೆಹಿಡಿದಿದ್ದು ಎಲ್ಲರ ಗಮನ ಸೆಳೆಯಿತು. ಇನ್ನು ಪಂದ್ಯದ ೭೫ನೇ ನಿಮಿಷದಲ್ಲಿ ಡೋನ್ ದಾಖಲಿಸಿದ ಆಕರ್ಷಕ ಗೋಲ್ ಪರಿಣಾಮ ಪಂದ್ಯದಲ್ಲಿ ಜಪಾನ್ ಸಮಬಲ ಸಾಧಿಸುವಲ್ಲಿ ಸಫಲತೆ ಕಂಡಿತು. ಈ ಅವಧಿಯಲ್ಲೂ ಜರ್ಮನಿ ಹೋರಾಟ ಮುಂದುವರೆದಿದ್ದರೂ ಗೋಲ್‌ಗಳು ಮಾತ್ರ ಹೊರಬರಲಿಲ್ಲ. ಅಲ್ಲದೆ ೮೩ನೇ ನಿಮಿಷದಲ್ಲಿ ಟುಕುಮಾ ಅಸಾನಾ ಅವರ ಆಕರ್ಷಕ ಗೋಲ್ ಮಾತ್ರ ಪಂದ್ಯದ ಗತಿಯನ್ನೇ ಬದಲಾಯಿಸಿಬಿಟ್ಟಿತು. ಈ ಮೂಲಕ ೨-೧ರ ಅಂತರದಲ್ಲಿ ಮುನ್ನಡೆ ಪಡೆದ ಜಪಾನ್ ಬಳಿಕ ಹಿಂತಿರುಗಿ ನೋಡಲಿಲ್ಲ. ಅಲ್ಲದೆ ನಿಗದಿತ ಅವಧಿ ಬಳಿಕ ನೀಡಲಾದ ಹೆಚ್ಚುವರಿ ಅವಧಿಯಲ್ಲೂ ಜರ್ಮನಿ ಗೋಲು ದಾಖಲಿಸಿಲು ವಿಫಲವಾಗಿದ್ದು, ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತು. ಅಂತಿಮವಾಗಿ ಜಪಾನ್ ೨-೧ ಅಂತರದಲ್ಲೇ ಗೆದ್ದು ಅಮೂಲ್ಯ ೩ ಅಂಕ ಸಂಪಾದಿಸುವ ಜೊತೆಗೆ ಜಾಗತಿಕ ಫುಟ್ಬಾಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.