ಜಯ ಚಾಮರಾಜ ಒಡೆಯರ್ ಪ್ರತಿಮೆ ಅನಾವರಣ

ಮೈಸೂರು,ಜು.18:- ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಶ್ರೀ ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ಇಂದು ಜಯಚಾಮರಾಜೇಂದ್ರ ಒಡೆಯರ್ ಅವರ 103ನೇ ಜನ್ಮ ದಿನಾಚರಣೆ ಮತ್ತು ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಇಂದು ನಮ್ಮ ಪೂಜ್ಯ ಮಾವನವರು ಹಾಗೂ ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ಪ್ರತಿಮೆ ಅನಾವರಣ ಮತ್ತು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬಾ ಹೆಮ್ಮೆ ಮತ್ತು ಸಂತೋಷದ ಸಂದರ್ಭ. ಈ ಸಂಸ್ಥೆ ಆರಂಭವಾಗಿ 65 ವರ್ಷಗಳಾಗಿದೆ. 60 ವರ್ಷವಾದ ನಂತರ ವಜ್ರಮಹೋತ್ಸವ ಆಚರಿಸಬೇಕೆನ್ನುವ ಉದ್ದೇಶವಿತ್ತು. 2019ರಲ್ಲಿ ಈ ಪ್ರತಿಮೆ ಮಾಡಲು ಇಷ್ಟಪಟ್ಟು ಮಾಡಲು ಕೊಟ್ಟಿದ್ದಾದರೂ ಕಾರಣಾಂತರದಿಂದ ಇಲ್ಲಿಯತನಕ ಮಾಡಲು ಸಾಧ್ಯವಾಗದೇ ಇಂದು ಆ ಸುಸಂದರ್ಭ ಕೂಡಿ ಬಂದಿದೆ ಎಂದರು.
ಮಹಾರಾಜ ಜಯಚಾಮರಾಜ ಒಡೆಯರ್ ಅವರ ಕುರಿತು ಹೇಳಬೇಕೆಂದರೆ ಸ್ವಲ್ಪ ಸಮಯಗಳು ಸಾಲಲ್ಲ. ಅವರು ಅತ್ಯಂತ ಪ್ರತಿಭಾವಂತರು. ಉದಾತ್ತರು ಮತ್ತು ಉದಾರ ಮನಸಿನವರಾಗಿದ್ದರು. ಇವರು ವಿದ್ಯೆ, ಸಂಗೀತ, ಕಲೆ, ಸಾಹಿತ್ಯ, ಮತ್ತಿತರ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದರು. ಅದರಲ್ಲೂ ವಿಶೇಷವಾಗಿ ವಾಕ್ ಮತ್ತು ಶ್ರವಣ ಸಂಸ್ಥೆಗೆ ಬಹಳ ಪ್ರಾಮುಖ್ಯತೆ ಕೊಟ್ಟವರು. ಕರ್ನಾಟಕ ಸಂಗೀತ ಹಾಗೂ ಪಾಶ್ಚಿಮಾತ್ಯ ಸಂಗೀತದಲ್ಲಿ ಅತ್ಯಂತ ಆಸಕ್ತಿಯುಳ್ಳವರಾಗಿದ್ದರು. ಇವರ ಕರ್ನಾಟಕ ಸಂಗೀತದ ಕೃತಿಗಳು ಶ್ರೀವಿದ್ಯಾ ಎಂಬ ಹೆಸರಿನಲ್ಲಿ ರಚಿಸಲಾಗಿದ್ದು, ಕೆಲವೊಂದು ಬಹಳ ಅಪರೂಪದ ರಚನೆ ಕೂಡ ಇವರ ಕೃತಿಗಳಿಗೆ ಅಳವಡಿಸಲಾಗಿದೆ. ಪಾಶ್ಚಿಮಾತ್ಯ ಸಂಗೀತಕ್ಕೆ ಇವರು ಕೊಟ್ಟ ಅಪಾರ ಕೊಡುಗೆ ಈ ಕ್ಷೇತ್ರದಲ್ಲಿ ಅವರ ಹೆಸರು ಅಚ್ಚಳಿಯದೇ ಉಳಿದಿದೆ. ಮಹಾರಾಜ ಜಯಚಾಮರಾಜ ಒಡೆಯರ್ ಪಂಚವಾರ್ಷಿಕ ಯೋಜನೆ ಮತ್ತಿತರ ಜನಪರ ಕಾರ್ಯಗಳು ವಿಶೇಷವಾಗಿದ್ದು, ಇವರ ಮತ್ತೊಂದು ಕ್ಷೇತ್ರದಲ್ಲಿನ ಕೊಡುಗೆ ವನ್ಯಜೀವಿಗಳ ರಕ್ಷಣೆ ಮತ್ತು ಪರಿಸರ ಸಮತೋಲನ ಎಂದು ತಿಳಿಸಿದರು.
ಈ ಸಂಸ್ಥಾಪನೆಯ ಮುಖ್ಯ ಉದ್ದೇಶ ಎಲ್ಲರಿಗೂ ಶಿಕ್ಷಣ ದೊರಕಿಸುವುದು. ಈ ನಿಟ್ಟಿನಲ್ಲಿ ಟ್ರಸ್ಟ್ ಸ್ಥಾಪನೆಯಾಗುವ ಮುಂಚಿನಿಂದಲೂ ಅಂದರೆ ಸುಮಾರು ನೂರು ವರ್ಷದ ಹಿಂದಿನಿಂದಲೂ ಶಾಲೆಗಳನ್ನು ನಡೆಸಿಕೊಂಡು ಬಂದಿರುವುದು ನಿದರ್ಶನ ಇದೆ. ಈ ಸಂಸ್ಥೆ 1957ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ತಮ್ಮ ಪೂರ್ವಜನರು ಹಾಕೊಕೊಟ್ಟ ಮಾದರಿಯಲ್ಲಿ ಶಿಕ್ಷಣ ಕೇಂದ್ರಗಳನ್ನು ನಡೆಸಿಕೊಂಡು ಬಂದಿರುವುದು ಆಡಳಿತ ಮಂಡಳಿಯವರು ಹಾಗೂ ಬೋಧಕ ವರ್ಗದವರ ಉತ್ಸಾಹ ಮತ್ತು ಸಂಸ್ಥೆಯ ಬಗ್ಗೆ ಸಮರ್ಪಣಾ ಭಾವ ಬಹಳ ಮುಖ್ಯವಾಗಿತ್ತು ಎಂದರಲ್ಲದೇ ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ವಿದ್ಯಾರ್ಥಿನಿಯವರು ಕೂಡ ಅಷ್ಟೇ ಶ್ರಮವಹಿಸಿ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದೇ ಆದರೆ ಅವರ ಏಳ್ಗೆ ನಿಶ್ಚಿತ ಎಂದರು. ಟ್ರಸ್ಟ್ ನ ಇನ್ನೊಂದು ವಿಶೇಷವೆಂದರೆ ವಿದ್ಯಾರ್ಥಿನಿಯರಿಗೆ ಗಿಡಮರಗಳ ಮಹತ್ವ, ತಿಳುವಳಿಕೆ ನೀಡುವುದು. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಕಡೆಯಿಂದ ಸುಮಾರು ಮೂರು ಸಾವಿರ ಸಸಿಗಳನ್ನು ಶಾಲೆಯಲ್ಲಿಯೇ ಬೆಳೆಸಿ ಮಹಾನಗರ ಪಾಲಿಕೆ ಮತ್ತಿತರ ಶಿಕ್ಷಣ ಸಂಸ್ಥೆಗಳು, ಹಾಗೂ ಖಾಸಗಿ ಸಂಸ್ಥೆಗಳಿಗೂ ಕೊಡಲಾಗಿದೆ. ಈ ಮೂಲಕ ನಮ್ಮ ವಿದ್ಯಾರ್ಥಿನಿಯರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಒಂದು ಮಾದರಿ. ಈ ಸಂಸ್ಥೆಯ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿನಿಯರು ತಮ್ಮ ತಮ್ಮ ಗುರಿ ಮುಟ್ಟಲಿ ಮತ್ತು ನಮ್ಮ ದೇಶದ ಸತ್ಪ್ರಜೆಗಳಾಗಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿರಲಿ, ಈ ವಿದ್ಯಾಸಂಸ್ಥೆಗಳೂ ಕೂಡ ಮುಂದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿ ಎಂದು ಆಶಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕುವೆಂಪು ಸಂಸ್ಥೆಯ ಕನ್ನಡ ಅಧ್ಯಯನದ ಸಂದರ್ಶಕ ಕನ್ನಡ ಪ್ರಾಧ್ಯಾಪಕರಾದ ಡಾ.ಎನ್.ಎಸ್.ತಾರಾನಾಥ್, ಟ್ರಸ್ಟಿಗಳು, ಸದಸ್ಯರು ಉಪಸ್ಥಿತರಿದ್ದರು.