ಚೆನ್ನೈ,ಜು.೩೧-ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು ರಾಜವಂಶದ ಪಕ್ಷ ಎಂದು ಕರೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಮಾರುತ್ತರ ನೀಡಿದ್ದು, ಅಮಿತ್ ಶಾ ಪುತ್ರ ಜಯ್ ಶಾ ಅವರನ್ನು ಯಾವ ಮಾನದಂಡದ ಮೇಲೆ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮಾತಿನ ಬ್ಯಾಟ್ ಬೀಸಿದ್ದಾರೆ.
ತಮಿಳುನಾಡು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ನಿಮ್ಮ ಮಗ ಜಯ್ ಶಾ ಎಷ್ಟು ರನ್ ಗಳಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿದ್ದಾರೆ ಎಂದು ಕೇಳಿದ್ದಾರೆ.
ರಾಮೇಶ್ವರಂನಲ್ಲಿ ಶುಕ್ರವಾರ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಪಾದಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ, ಡಿಎಂಕೆ ಪಕ್ಷದ ವಂಶಾಡಳಿತವನ್ನು ಟೀಕಿಸಿದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಡಿಎಂಕೆ ಮಿತ್ರಪಕ್ಷಗಳು ಡಿಎಂಕೆ ರಾಜವಂಶದ ಪಕ್ಷವಾಗಿರುವುದರಿಂದ ರಾಜ್ಯದಲ್ಲಿ ವಂಶಾಡಳಿತ ರಾಜಕೀಯವನ್ನು ಉತ್ತೇಜಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.