ಜಯಲಲಿತಾರನ್ನು ಹೊಗಳಿದ ಸೂಪರ್ ಸ್ಟಾರ್ ರಜನಿ

ಚನ್ನೈ, ಫೆ. ೨೫-ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜೆ. ಜಯಲಲಿತಾ ಅವರ ಕುರಿತು ನಟ ರಜನೀಕಾಂತ್ ಮನಬಿಚ್ಚಿ ಮಾತನಾಡಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ೭೫ನೇ ಜನ್ಮದಿನದ ಅಂಗವಾಗಿ ನಟ ಸೂಪರ್ ಸ್ಟಾರ್ ರಜನಿಕಾಂತ್ ಶ್ರದ್ಧಾಂಜಲಿ ಸಲ್ಲಿಸಿದರು
ತಮಿಳು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಡಿಯೋದಲ್ಲಿ ನಟ, ಎಐಎಡಿಎಂಕೆ ಮುಖ್ಯಸ್ಥರಂತಹ ಇನ್ನೊಬ್ಬ ಮಹಿಳೆಯನ್ನು ನಾವು ಎಂದಿಗೂ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಯಲಲಿತಾ ಅವರಂತಹ ಇನ್ನೊಬ್ಬ ಮಹಿಳೆಯನ್ನು ನೀವು ಎಂದಿಗೂ ನೋಡಲು ಸಾಧ್ಯವಿಲ್ಲ. ಅವರ ಸೌಂದರ್ಯ, ಗಾಂಭೀರ್ಯ, ಜ್ಞಾನ, ಧೈರ್ಯ ಮತ್ತು ವರ್ಚಸ್ಸು ಮತ್ತೆಂದೂ ಬೇರೆಯವರಲ್ಲಿ ಕಾಣುವುದು ಸಾಧ್ಯವಿಲ್ಲ. ಎಂಜಿಆರ್‌ಗೆ ಪುರಚಿ ತಲೈವರ್ ಎಂಬ ಬಿರುದು ಹೇಗೆ ಬಂತು ಎಂಬುದು ನಮಗೆಲ್ಲ ಗೊತ್ತೇ ಇದೆ ಎಂದು ವಿವರಿಸಿದ್ದಾರೆ.
ನಟನಾಗಿಯೇ ಪಕ್ಷ ಆರಂಭಿಸಿ ಮುಖ್ಯಮಂತ್ರಿಯಾಗಿ ದೊಡ್ಡ ಕ್ರಾಂತಿಯನ್ನೇ ನಡೆಸಿದರು. ಅವರ ನಿಧನದ ನಂತರ, ಪಕ್ಷ ಇಬ್ಭಾಗವಾದಾಗ, ಅನೇಕ ಅನುಭವಿ ನಾಯಕರು ಇದ್ದರೂ ಜಯಲಲಿತಾ ಒಂಟಿಯಾಗಿ, ಪಕ್ಷವನ್ನು ಒಗ್ಗೂಡಿಸಿ, ಅದನ್ನು ಬಲಪಡಿಸಿದರು. ಅನೇಕ ವರ್ಷಗಳ ಕಾಲ ರಾಜ್ಯವನ್ನು ಆಳಿದರು ಎಂದಿದ್ದಾರೆ. ದೇಶದ ಎಲ್ಲಾ ನಾಯಕರು ಜಯಲಲಿತಾ ಅವರನ್ನು ಗೌರವಿಸುತ್ತಾರೆ. ಅವರ ಪ್ರತಿಭೆಗೆ ಬೆರಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ನಮ್ಮಲ್ಲಿ ತಪ್ಪು ತಿಳುವಳಿಕೆ ಇದ್ದ ಒಂದು ಸಮಯವಿತ್ತು. ಅಂದಿನ ಪರಿಸ್ಥಿತಿ ನನ್ನನ್ನು ಅವರ ವಿರುದ್ಧ ಮಾತನಾಡುವಂತೆ ಮಾಡಿತು. ಅದರ ಹೊರತಾಗಿಯೂ ನನ್ನ ಮಗಳ ಮದುವೆಗೆ ಆಹ್ವಾನಿಸಲು ಹೋದಾಗ ಅವರು ಹಿಂದಿನದನ್ನು ಮರೆತು ಪ್ರೀತಿಯಿಂದ ಮದುವೆಗೆ ಬಂದಿದ್ದರು. ಅವರು ಸಹಾನುಭೂತಿಯ ವ್ಯಕ್ತಿ. ಅವರ ಪರಂಪರೆ ದೀರ್ಘಕಾಲ ಬದುಕಲಿ ಎಂದಿದ್ದಾರೆ.೧೯೯೬ ರ ತಮಿಳುನಾಡು ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ, ರಜನಿಕಾಂತ್ ಅವರು ಜಯಲಲಿತಾ ವಿರುದ್ಧ ಮಾತನಾಡಿದ್ದರು. ಡಿಎಂಕೆ-ಟಿಎಂಸಿ ಮೈತ್ರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.