ಜಯನಗರ ಜನತೆ ಬದಲಾವಣೆ ಬಯಸಿದ್ದಾರೆ:ಸಿ.ಕೆ.ರಾಮಮೂರ್ತಿ

ಬೆಂಗಳೂರು, ಮೇ.೩-ಕಳೆದ ಐದು ವರ್ಷಗಳಿಂದ ಜಯನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದ್ದು, ಈ ಬಾರಿ ಇಲ್ಲಿನ ಜನರು ಬದಲಾವಣೆ ಬಯಸಿದ್ದು, ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮ ಮೂರ್ತಿ ತಿಳಿಸಿದರು.
ನಗರದಲ್ಲಿಂದು ಜಯನಗರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ನಡೆಸಿದ ಅವರು, ಈ ವೇಳೆ ಪಕ್ಷದ ಮುಖಂಡರು, ಕಾರ್ಯ ಕರ್ತರು ಕೂಡ ಸಾಥ್ ನೀಡಿದರು.
ಸ್ಥಳೀಯ ಸಂಘ ಸಂಸ್ಥೆಗಳು, ಇಲ್ಲಿನ ಜನರ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿವೆ. ಹೀಗಾಗಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಯನಗರ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಮಾಡುವೆ ಎಂದು ತಿಳಿಸಿದರು.
ಈ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಸರ ಇನ್ನಷ್ಟು ಆಕರ್ಷಕವಾಗಬೇಕು. ರಸ್ತೆ, ಮೂಲಸೌಕರ್ಯಗಳು ಸಹ ಚೆನ್ನಾಗಿರಬೇಕು. ಹೀಗೆ, ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಬದ್ಧವಾಗಿದ್ದೇನೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ೭೫ ಹೊಸ ಮುಖಗಳಿಗೆ ಅವಕಾಶ ಕೊಟ್ಟಿದೆ. ಸುರಕ್ಷಿತ ವಾತಾವರಣ ಬೇಕಾದರೆ ಒಳ್ಳೆಯ ಸರ್ಕಾರ ಇರಬೇಕು. ಆದ್ದರಿಂದ ಬಿಜೆಪಿಗೆ ಮತ ಹಾಕಿ ಸ್ಥಿರ ಸರ್ಕಾರವನ್ನು ಜಾರಿಗೆ ತನ್ನಿ. ದೇಶದಲ್ಲಿ ಕೈ ಬಲಪಡಿಸಬೇಕಾದರೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಜನರಿಗೆ ಮನವಿ ಮಾಡಿದರು.

ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿರವರು ಕ್ಷೇತ್ರದ ವಿವಿಧ ಕಡೆ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.