ಜಯನಗರದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಧ್ಯಾತ್ಮಿಕ ಪ್ರವಚನ

ಕಲಬುರಗಿ,ಜು.26-ನಗರದ ಜಯನಗರ ಶಿವ ಮಂದಿರದಲ್ಲಿ ಪ್ರತಿ ವರ್ಷದಂತೆ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ತ ವಿನೂತನ ರೀತಿಯಲ್ಲಿ ಒಂದು ತಿಂಗಳು “ಶರಣರ ಧರ್ಮ -ಅಧ್ಯಾತ್ಮಿಕ ಪ್ರವಚನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ “ಶರಣರ ಧರ್ಮ” ಪ್ರವಚನ ಜು.29 ರಿಂದ ಆ.28 ರವರೆಗೆ ದಿನ ನಿತ್ಯ ಸಾಯಂಕಾಲ 7 ರಿಂದ 8 ಗಂಟೆವರೆಗೆ ಜರುಗುವುದು. ಪ್ರವಚನವನ್ನು ಖ್ಯಾತ ಪ್ರವಚನಕಾರ ಹಾಗೂ ಸಾಹಿತಿ ಪಂ.ವೇ.ಶಿವಕವಿ ಜೋಗೂರ ಅವರು ನಡೆಸಿಕೊಡುವರು.”ಶರಣರ ಧರ್ಮ” ಎಂಬ ಆಧ್ಯಾತ್ಮಿಕ ಪ್ರವಚನ ಸಾರ್ವಕಾಲಿಕಕ್ಕೂ ಶ್ರೇಷ್ಠ. ಶರಣರ ಆಧ್ಯಾತ್ಮಿಕ ಚಿಂತನೆಗಳು, ಶರಣರ ನುಡಿಗಳು ಹಾಗೂ ನಾಡಿಗೆ ನೀಡಿದ ಸಂದೇಶಗಳನ್ನು ಜನರಿಗೆ ಅರ್ಥವಾಗುವಂತೆ ತಿಳಿಸುವ ಉದ್ದೇಶದಿಂದ ಮತ್ತು ಶರಣರ ಮೌಲ್ಯಗಳನ್ನು ಜಗಕ್ಕೆ ಸಾರಬೇಕೆಂಬ ಸದುದ್ದೇಶದಿಂದ ಪ್ರವಚನ ಕಾರ್ಯಕ್ರಮ ಪ್ರತಿ ವರ್ಷ ಜಯನಗರ ಶಿವಮಂದಿರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ-19 ಹಾವಳಿಯಿಂದ ಪ್ರವಚನವನ್ನು ರದ್ದು ಗೊಳಿಸಿ ದಿನ ನಿತ್ಯ ಸರಳವಾಗಿ ಪೂಜೆ ಪುನಸ್ಕಾರ ಮಾಡುವುದರ ಮೂಲಕ ಶ್ರಾವಣ ಮಾಸದ ಆಚರಣೆ ಮಾಡಲಾಯಿತು. ಈ ವರ್ಷ ಕೊರೊನಾ ಇಲ್ಲದೇ ಇರುವುದರಿಂದ ಮತ್ತು ಜನರ ಆಶಯದಂತೆ ಪ್ರವಚನ ಈ ಬಾರಿ ಹಮ್ಮಿಕೊಳ್ಳಲಾಗಿದೆ. ಪ್ರವಚನದ ಜೊತೆಗೆ ಅಧ್ಯಾತ್ಮಿಕ ಚಿಂತನೆಗಳು ಹಾಗೂ ಉಪನ್ಯಾಸಗಳು ಜರುಗುವವು. ಕಲ್ಯಾಣ ಕರ್ನಾಟಕದ ಪ್ರಮುಖ ಮಠದ ಮಠಾಧೀಶರು ಮತ್ತು ಮಹಾಮನೆಯ ಶರಣರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷರು ಆಗಿರುವ ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಸಾಹಿತಿ ಹಾಗೂ ಲೇಖಕ ಬಿ.ಹೆಚ್.ನಿರಗುಡಿ ಆಗಮಿಸುವರು. ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಅಧ್ಯಕ್ಷತೆ ವಹಿಸುವರು. ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು.
ಸಾರ್ವಜನಿಕರು ಹಾಗೂ ಸದ್ಭಕ್ತರು ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಬೇಕು ಎಂದು ಅವರು ವಿನಂತಿ ಮನವಿ ಮಾಡಿದರು.
ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ, ಪ್ರಧಾನ ಕಾರ್ಯದರ್ಶಿ ಸುರ್ಯಕಾಂತ ಕೆ.ಬಿ,ಡಾ.ಎ.ಎಸ್.ಭದ್ರಶೆಟ್ಟಿ, ಬಸವರಾಜ ಅನ್ವರಕರ,ಎಂ.ಡಿ.ಮಠಪತಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.