ಜಯನಗರದಲ್ಲಿ ಮಾ 12 ರಿಂದ ಅಖಿಲಭಾರತ ರೈತ ಕೃಷಿ ಕಾರ್ಮಿಕ ಸಮ್ಮೇಳನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.02: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಮೂರು ದಿನಗಳ 3 ನೇ ಸಮ್ಮೇಳನ ಮಾ.12 ರಿಂದ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳ ಜಯನಗರದಲ್ಲಿ ನಡೆಯುತ್ತಿದ್ದು ಇದರಲ್ಲಿ
ಬಳ್ಳಾರಿಯಿಂದ 20 ಜನ, ರಾಜ್ಯದ 25 ಜಿಲ್ಲೆಗಳಿಂದ 150 ಜನ ದೇಶದ ವಿವಿಧ ರಾಜ್ಯಗಳಿಂದ ಎಂಟು ನೂರು ಜನ ಪ್ರತಿನಿಧಿಗಳು  ಪಾಲ್ಗೊಳ್ಳಲಿದೆಂದು ಎಐಕೆಕೆಎಂಎಸ್ ಸಂಘಟನೆ ತಿಳಿಸಿದೆ.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ, ಕಾರ್ಯದರ್ಶಿ ಗುರಳ್ಳಿ ರಾಜ ಅವರು ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಈ ಮಾಹಿತಿ ನೀಡಿದರು.      
ಎಐಕೆಕೆಎಂಎಸ್‍ನ ಜಿಲ್ಲಾ  ಆಧ್ಯಕ್ಷರಾದ ಶ್ರೀ ಗೋವಿಂದ್  ಅವರು  3ನೇ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಮ್ಮೇಳನದ ಕುರಿತು ಈ ಕೆಳಗಿನ ಹೇಳಿಕೆಯನ್ನು ಬಿಡುಗಡೆ ಮಾಡಿದರು.
ಸಮ್ಮೇಳನದ ಅಂಗವಾಗಿ  ಮಾ 11 ರಂದು, ಪಶ್ಚಿಮ ಬಂಗಾಳದ ಹೌರಾ ದ ಶರತ್ ಸದನ್‍ನಲ್ಲಿ ಅಂತರರಾಷ್ಟ್ರೀಯ ಸೆಮಿನಾರ್ ನಡೆಯಲಿದೆ.  ಅಮೇರಿಕಾ, ಬಾಂಗ್ಲಾದೇಶ, ನೇಪಾಳ ಮತ್ತು  ಇತರ ದೇಶಗಳ ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ಸಂಘಟನೆಯ ಅಖಿಲ ಭಾರತ ಅಧ್ಯಕ್ಷ ಸತ್ಯವಾನ್ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾ 12 ರಿಂದ 14 ರ ವರೆಗೆ ಸಮ್ಮೇಳನದ ಪ್ರತಿನಿಧಿ ಅಧಿವೇಶನವು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳ ಜಯನಗರದಲ್ಲಿ ನಡೆಯಲಿದೆ. ಎಸ್‍ಯುಸಿಐ(ಸಿ)ಯ ಪ್ರಧಾನ ಕಾರ್ಯದರ್ಶಿ ಶ ಪ್ರವಾಷ್ ಘೋಷ್ ಸಮಾರೋಪ  ಭಾಷಣ ಮಾಡಲಿದ್ದಾರೆ.
ಭಾರತೀಯ ಕೃಷಿ,  ರೈತರು ಮತ್ತು ಕೃಷಿ ಕಾರ್ಮಿಕರ ಶೋಚನೀಯ ಸ್ಥಿತಿ ಮತ್ತು ದೇಶ-ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅವರ ಹಿಂಬಾಲಕರ ವಿರುದ್ಧ ವಿಶೇಷವಾಗಿ ಕೇಂದ್ರ ಬಿಜೆಪಿ ಸರ್ಕಾರ ಮತ್ತು ವಿವಿಧ ಬಂಡವಾಳಶಾಹಿ ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟವನ್ನು ಬಲಪಡಿಸುವ ಸಂಘಟನೆಯ ಮುಂದಿರುವ ಕಾರ್ಯಗಳ ಕುರಿತು ಚರ್ಚಿಸಲಿದೆ.
ಸಮ್ಮೇಳನದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಬಿತ್ತನೆಗೂ ಮುನ್ನವೇ ಘೋಷಿಸಬೇಕು, ಮತ್ತು ಸುಗ್ಗಿಯ ಆರಂಭದಲ್ಲೇ ಖರೀದಿ ಕೇಂದ್ರವನ್ನು ತೆರೆಯಬೇಕು. ರೈತರಿಗೆ ಹಣವನ್ನು ತಕ್ಷಣವೇ ನೀಡಬೇಕು. ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿಯನ್ನು ಹೇರಬಾರದು. ಕೃಷಿ ಉತ್ಪನ್ನಗಳಲ್ಲಿ ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಜಾರಿಗೆ ತರಬೇಕು. ಕೃಷಿ ಒಳಸುಳಿಗಳ ಬೆಲೆಯನ್ನು ಇಳಿಸಬೇಕು, ಬೀಜ, ರಾಸಾಯನಿಕ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸರ್ಕಾರವೇ ರಿಯಾಯಿತಿ ದರದಲ್ಲಿ ರೈತರಿಗೆ ಅವಶ್ಯಕತೆವಿರುವಷ್ಟು ವಿತರಿಸಬೇಕು. ಬಗರು ಹುಕುಂ ಸಾಗುವಳಿದಾರಿಗೆ ಕೂಡಲೇ ಹಕ್ಕು ಪತ್ರ ವಿತರಿಸಬೇಕು. ವಿದ್ಯುತ್ ಕಾಯ್ದೆ 2022 ಜಾರಿಗೊಳಿಸಬಾರದು. ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡಬಾರದು. ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸಬೇಕು ಮೊದಲಾದ ಹಕ್ಕೊತ್ತಾಯ ಮಂಡಿಸಲಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡ ಹನುಂತಪ್ಪ ಮೊದಲಾದವರು‌ ಇದ್ದರು.