ಬೆಂಗಳೂರು, ಜೂ.26-ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಜಯದೇವ ಹೃದ್ರೋಗ ಆಸ್ಪತ್ರೆ, ಯುವ ಉದ್ಯಮಿ ನಿತೀನ್ ಕಾಮತ್ ಹಾಗೂ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ.


ಈ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಚರ್ಚೆ ಮಾಡಿ ಮೂವರು ಸಾಧಕರ ಆಯ್ಕೆ ಮಾಡಿದೆ. ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಶಸ್ತಿ ಜೊತೆಗೆ 5 ಲಕ್ಷ ರೂ ನಗದು ಬಹುಮಾನ ಒಳಗೊಂಡಿದೆ ಎಂದರು.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ಅವರಿಂದ ಕಸಗುಡಿಸುವ ಕೆಲಸಗಾರರವರೆಗೂ ಎಲ್ಲರೂ ಸೇವೆ ಸಲ್ಲಿಸಿದ್ದು, ಹೀಗಾಗಿ ಈ ಸಂಸ್ಥೆಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. 1600 ಬೆಡ್ ಸೌಲಭ್ಯ ಹೊಂದಿರುವ ಆಸ್ಪತ್ರೆಯು ಬಹಳ ಕಡಿಮೆ ದರದಲ್ಲಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ .
ಕಿರಿಯ ವಯಸ್ಸಿನಲ್ಲೇ ಜೇರೋಧ ಎಂಬ ನವೋದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ನಿತಿನ್ ಕಾಮತ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಈ ಸಂಸ್ಥೆಯಿಂದ ಬರುವ 25% ರಷ್ಟು ದುಡಿಮೆ ಹಣವನ್ನು ಸಾಮಾಜಿಕ ಸೇವೆಗೆ ಮುಡಿಪಿಟ್ಟಿದ್ದಾರೆ.
ಬೆಂಗಳೂರಿನ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಕೂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದಿತಿ ಅಶೋಕ್ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ವಿಶ್ವ ಗಾಲ್ಫ್ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿರುವ ಆಟಗಾರ್ತಿ ಅದಿತಿ ಅಶೋಕ್ ಆಗಿದ್ದಾರೆ.
ಈ ಬಾರಿ ಆರೋಗ್ಯ, ಉದ್ದಿಮೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಈ ಮೂವರು ವ್ಯಕ್ತಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸಾಧಕರಿಗೆ ನಾಳೆ ವಿಧಾನಸೌಧದಲ್ಲಿ ನಡೆಯಲಿರುವ 514ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಕೆಶಿ ಮಾಹಿತಿ ನೀಡಿದರು.