ಜಯದೇವ ಸಂಸ್ಥೆಯಲ್ಲಿ ೨೨೫ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ

ಬೆಂಗಳೂರು, ಜೂ. ೨೧- ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಶಾಖೆ ಸೇರಿ ಕೇವಲ ೭ ದಿವಸಗಳಲ್ಲಿ ಕಡುಬಡವರು ಮತ್ತು ನಿಸ್ಸಹಾಯಕ ಹೃದ್ರೋಗಿಗಳಿಗೆ ಆಯೋಜಿಸಿದ್ದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಸುಮಾರು ೨೨೫ ಬಡರೋಗಿಗಳಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು ಹಾಗೂ ಈ ಎಲ್ಲಾ ರೋಗಿಗಳಿಗೂ ಸ್ಟಂಟ್‌ಅನ್ನು ಉಚಿತವಾಗಿ ಅಳವಾಡಿಸಲಾಗಿದೆ. ರಾಜ್ಯದ ಹೃದ್ರೋಗಿಗಳನ್ನೊಳಗೊಂಡಂತೆ ಪಶ್ಚಿಮ ಬಂಗಾಳ, ಆಂಧ್ರ ಮತ್ತು ತಮಿಳುನಾಡು, ತೆಲಾಂಗಾಣರವರಿಗೂ ಚಿಕಿತ್ಸೆ ನೀಡಲಾಯಿತು.
೨೨೫ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಕೇವಲ ೭ ದಿವಸಗಳಲ್ಲಿ ಮಾಡುವುದು. ಒಂದು ಬೃಹತ್ ಸಾಧನೆ. ಈ ಅಸಾಧಾರಣ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ೧೭ ಕ್ಯಾತ್‌ಲ್ಯಾಬ್, ೧೨೦ ನುರಿತ ಸಂಸ್ಥೆಯ ವೈದ್ಯರು ಹಾಗೂ ತಂತ್ರಜ್ಞರು ಮತ್ತು ಶುಶ್ರೂಷಕರು, ಡಿ-ದರ್ಜೆ ನೌಕರರ ಕೌಶಲ್ಯತೆ ಮತ್ತು ಗುಣಮಟ್ಟದ ಮೂಲಭೂತ ಸೌಕರ್ಯದ ಪೂರೈಕೆಯಿಂದ ಇದು ಸಾಧ್ಯವಾಗಿದೆ. ಅಲ್ಲದೇ ಎಲ್ಲರ ಕಾರ್ಯಾದಕ್ಷತೆ ಮತ್ತು ಸಮರ್ಪಣಾ ಭಾವದ ಸೇವೆಯೇ ಕಾರಣವಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಎಲ್ಲ ರೋಗಿಗಳು ಬಡರೈತರು, ದಿನಗೂಲಿ ನೌಕರರು, ಬೀದಿಬದಿಯ ಕಾರ್ಮಿಕರು ಹಾಗೂ ನಿಸ್ಸಹಾಯಕ ಹಿರಿಯ ನಾಗರೀಕರಾಗಿ ರುತ್ತಾರೆ. ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ಇಲಿನಾಯಿಸ್, ಅಮೇರಿಕಾ ಮತ್ತು ಮೆಡ್ಟ್ರಾನಿಕ್ ವ್ಯಾಸ್ಕುಲರ್ ಡಿವಿಷನ್, ಅಮೇರಿಕಾರವರ ವತಿಯಿಂದ ಕಾರ್ಯಾ ಗಾರಕ್ಕೆ ಸ್ಟಂಟ್‌ಗಳ ಉದಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಹೃದಯಾಘಾತಕ್ಕೆ ಸಂಬಂಧಿತ ಕಾಯಿಲೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಬಡವ ಬಲ್ಲಿದನೆಂಬ ಬೇದಭಾವವಿಲ್ಲದೆ ಜನರ ಆತಂಕಕ್ಕೆ ಕಾರಣವಾಗಿದೆ. ಈ ಕಾರ್ಯಾಗಾರದಲ್ಲಿ ೩೧ ವರ್ಷದ ದಿನಗೂಲಿ ರೈತಾಪಿಯಾಗಿದ್ದು ಅತ್ಯಂತ ಕಿರಿಯ ವಯಸ್ಸಿನವರಾಗಿದ್ದು, ೮೫ ವರ್ಷದ ಅಶಕ್ತ ಹಿರಿಯ ನಾಗರೀಕರಿರುತ್ತಾರೆ. ಶೇಕಡಾ ೨೫ ರಷ್ಟು ರೋಗಿಗಳು ೫೦ ವರ್ಷಕ್ಕೂ ಕಡಿಮೆ ವಯಸ್ಕರಾಗಿದ್ದಾರೆ ಹಾಗೂ ಶೇಕಡಾ ೭೮% ರೋಗಿಗಳು ಗಂಡಸರು ಮತ್ತು ಉಳಿದವರು ಹೆಂಗಸರು. ಚಿಕಿತ್ಸೆ ಪಡೆದ ೨೨೫ ರೋಗಿಗಳಲ್ಲಿ ಕಂಡುಬಂದ ಪ್ರಮುಖ ಕಾರಣಗಳು ಎಂದರೆ ಶೇಕಡ ೫೦ರಷ್ಟು ರೋಗಿಗಳಲ್ಲಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ – ಶೇಕಡ ೫೩, ಧೂಮಪಾನ – ಶೇಕಡ ೩೬ರಷ್ಟು ಹಾಗೂ ಅಧಿಕ ಕೊಲೆಸ್ಟ್ರಾಲ್ – ಶೇಕಡ ೩೦ ಕಂಡುಬಂದಿದೆ.
ಡಾ. ಜಿ. ಸುಬ್ರಮಣಿರವರ ಸಾಮಾಜಿಕ ಕಳಕಳಿ, ಉದಾರವಾದ ಕೊಡುಗೆ, ದೇಶಾಭಿಮಾನ ಮತ್ತು ಬಡರೋಗಿಗಳ ಚಿಕಿತ್ಸೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಭಾಗವಹಿಸುತ್ತಿರುವುದು, ಇತರೆ ಎಲ್ಲಾ ಅನಿವಾಸಿ ಭಾರತೀಯ ವೈದ್ಯರುಗಳಿಗೆ ಮಾದರಿಯಾಗಿ ರುತ್ತಾರೆ ಎಂದರು.
ಡಾ. ಸಿ.ಎನ್. ಮಂಜುನಾಥ್‌ರವರು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದ ರೋಗಿಗಳೊಡನೆ ಮಾತನಾಡಿ ಅವರಿಗೆ ಸೂಚಿಸಿರುವಂತಹ ಬ್ಲಡ್ ತಿನ್ನಿಂಗ್ ಮಾತ್ರೆಗಳನ್ನು ನಿಲ್ಲಿಸಬಾರದೆಂದು ತಿಳಿಸಿದರು, ನಿಲ್ಲಿಸಿದಲ್ಲಿ ಮತ್ತೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದರು. ಅಲ್ಲದೇ ರಕ್ತದೊತ್ತಡ ಮತ್ತು ಸಕ್ಕರೆ ಅಂಶದಲ್ಲಿ ನಿಯಂತ್ರಣ, ಹೆಚ್ಚಿನ ತರಕಾರಿ ಮತ್ತು ಹಣ್ಣುಗಳ ಸೇವನೆ ಮತ್ತು ದಿನನಿತ್ಯ ವ್ಯಾಯಾಮವನ್ನು ಮಾಡಲು ಸೂಚಿಸಿದರು. ನಾವು ಕೊಟ್ಟಂತಹ ಸ್ಟಂಟ್ ಸಮರ್ಪಕವಾಗಿ ಬಡವರಿಗೆ ಉಪಯೋಗವಾಗುತ್ತಿದೆ ಎಂದರು.

ಉಚಿತ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾದ ರೋಗಿಗಳೊಂದಿಗೆ ಶ್ರೀ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್, ಅಮೇರಿಕಾದ ಹೃದಯತಜ್ಞರುಗಳಾದ
ಡಾ. ಗೋವಿಂದರಾಜು ಸುಬ್ರಮಣಿ, ಡಾ. ದೇವರಾಜ್ ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಎಸ್. ಶಂಕರ್ ಇದ್ದಾರೆ.