ಜಯದೇವಿತಾಯಿಯ ಸಾಹಿತ್ಯ ಸೇವೆ ದೊಡ್ಡದು

ಬಸವಕಲ್ಯಾಣ:ಜೂ.24: ಕವಯತ್ರಿ ಜಯದೇವಿತಾಯಿ ಲಿಗಾಡೆಯವರ ಸಾಹಿತ್ಯಿಕ ಸೇವೆ ದೊಡ್ಡದು. ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಹಿಳಾ ಕುಲಕ್ಕೆ ಗೌರವ ತಂದರು’ ಎಂದು ಸಾಹಿತಿ ಮೀನಾಕ್ಷಿ ಬಾಳಿ ಹೇಳಿದರು.

ನಗರದ ಬಿಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಶುಕ್ರವಾರ ಆಯೋಜಿಸಿದ್ದ ಜಯದೇವಿತಾಯಿ ಲಿಗಾಡೆ ಜನ್ಮದಿನ ಹಾಗೂ ಆಧುನಿಕ ಯುಗದಲ್ಲಿ ಮಹಿಳೆ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಆಧುನಿಕತೆಯ ಪ್ರಭಾವದ ಕಾರಣವೇ ಮಹಿಳೆಯರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಯಿತು. ಶಿಕ್ಷಣ ಪಡೆದು ಸುಧಾರಣೆಯ ಹಾದಿಯಲ್ಲಿ ನಡೆಯುವಂತಾಯಿತು. ಕಂದಾಚಾರ ಹಾಗೂ ಇತರೆ ಮೌಢ್ಯಗಳನ್ನು ಬಿಟ್ಟರು’ ಎಂದರು.

‘ಬಸವಣ್ಣನವರು ಸಮಾನತಾವಾದಿ ಆಗಿದ್ದರು. ಜಾತಿ, ಧರ್ಮದ ಸಂಕೋಲೆಯಿಂದ ಜನರನ್ನು ಬಿಡಿಸಿ ವೈಚಾರಿಕ ಪ್ರಜ್ಞೆ ಬೆಳೆಸುವುದಕ್ಕಾಗಿ ಹಾಗೂ ಸಮಾಜ ಜಾಗೃತಿಗಾಗಿ ವಚನಗಳನ್ನು ಸಹ ರಚಿಸಿದರು. ಆ ಚಿಂತನೆಗಳೇ ಮುಂದೆ ಸಂವಿಧಾನದ ರೂಪ ಪಡೆದುಕೊಂಡವು’ ಎಂದರು.

ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ಭೀಮಾಶಂಕರ ಬಿರಾದಾರ ಮಾತನಾಡಿ, ‘ಆಧುನಿಕ ಯುಗದಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಿದೆ. ಜಯದೇವಿತಾಯಿ ಸಾಹಿತ್ಯಕ ಅಷ್ಟೇ ಅಲ್ಲ; ಕನ್ನಡ ನಾಡು ನುಡಿಯ ಸಂರಕ್ಷಣೆಗಾಗಿಯೂ ಸತತವಾಗಿ ಶ್ರಮಿಸಿದ್ದಾರೆ’ ಎಂದರು.

ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಉಪನ್ಯಾಸಕ ಶಿವಾಜಿ ಮೇತ್ರೆ, ಮನೋಜಕುಮಾರ ಕೇರಳ್ಳಿ ಮಾತನಾಡಿದರು.

ಮೀನಾಕ್ಷಿ ಬಾಳಿ ಅವರಿಗೆ ಜಯದೇವಿತಾಯಿ ಜನ್ಮದಿನದ ಪ್ರಯಕ್ತ ಪ್ರಮಾಣಪತ್ರ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಎಂಜಿನಿಯರಿಂಗ್ ಕಾಲೇಜಿನ ಅಧೀಕ್ಷಕ ಪ್ರೇಮಸಾಗರ ಪಾಟೀಲ, ಪ್ರಾಚಾರ್ಯ ಅಶೋಕಕುಮಾರ ಉಪಸ್ಥಿತರಿದ್ದರು.