ಜಯಚಂದ್ರ ಆಯ್ಕೆ ಸೂಕ್ತ: ಬಿ.ಎಲ್.ಶಂಕರ್

ಸಿರಾ, ಅ. ೨೭- ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭಾ ಉಪಚುನಾವಣೆಯಲ್ಲಿ ಯಾರೇ ಗೆದ್ದರೂ ಆಡಳಿತ ಪಕ್ಷಕ್ಕಾಗಲೀ, ಸರ್ಕಾರಕ್ಕಾಗಲೀ ಯಾವುದೇ ರೀತಿಯ ವ್ಯತ್ಯಾಸವಾಗುವುದಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಸಮರ್ಥವಾಗಿ ಪ್ರಶ್ನಿಸುವ, ಅನುಭವ ಇರುವ, ಅಗತ್ಯ ಹಿನ್ನೆಲೆ ಇರುವ ವ್ಯಕ್ತಿ ಬೇಕಿರುವ ಕಾರಣ ಜಯಚಂದ್ರ ಅವರ ಆಯ್ಕೆ ಸೂಕ್ತ ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟರು.
ಇಲ್ಲಿನ ಕಾಂಗ್ರೆಸ್ ಪ್ರಚಾರ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಸದನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಸಭೆಯಲ್ಲಿ ಉತ್ತರ ಕೊಡದೇ ನುಣುಚಿಕೊಳ್ಳಬಹುದೇನೋ, ಆದರೆ ಕಾರ್ಯಾಂಗ ಅಥವಾ ಅಧಿಕಾರಿ ವರ್ಗ ಅದಕ್ಕೆ ಉತ್ತರದಾಯಿತ್ವ ವಹಿಸುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಜಯಚಂದ್ರ ಅನಿವಾರ್ಯ ಎಂದರು.
ಸ್ವಾತಂತ್ರ್ಯ ಬಂದಾಗಿನಿಂದ ದೇಶದಲ್ಲಿ ಪ್ರತಿ ೨೦ ವರ್ಷಕ್ಕೊಮ್ಮೆ ವಿವಿಧ ಅಂಶಗಳ ಮೇಲೆ ಚುನಾವಣೆ ನಡೆಯುತ್ತಿದೆ. ಮೊದಲಿಗೆ ಸ್ವತಂತ್ರ, ರಾಷ್ತ್ರೀಯ ಹೋರಾಟದ ಹಿನ್ನೆಲೆಯವರಿಗೆ ಪ್ರಾಮುಖ್ಯತೆ ಇದ್ದರೆ, ನಂತರ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದ್ದವು. ಇತ್ತೀಚಿನ ೧೦ ವರ್ಷಗಳಿಂದ ಬದುಕಿಗೆ ಸಂಬಂಧಪಟ್ಟ ವಿಚಾರಗಳಿಗಿಂತ ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಜಾತಿ, ಮತ ಅಥವಾ ವೈಯುಕ್ತಿಕ ವಿಚಾರಗಳನ್ನು ಭಾವನಾತ್ಮಕವಾಗಿಸಿ, ಚುನಾವಣೆ ನಡೆಸಲಾಗುತ್ತಿದೆ. ಇದರೊಂದಿಗೆ ಹಣದ ರಾಜಕಾರಣವೂ ಸೇರಿದ ಕಾರಣ ರಾಜರಾಜೇಶ್ವರಿ ನಗರದ ಉಪ ಚುನಾವಣೆ ನಡೆಯುತ್ತಿದೆ ಎಂದರು.
ಪಕ್ಷಾಂತರ ನಿಷೇಧ ಕಾಯ್ದೆ ಒಂದು ಹಂತದಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರುವವರಿಗೆ ಕಡಿವಾಣ ಹಾಕಿತ್ತು. ಮೂರನೇ ಒಂದು ಭಾಗವೂ ಸರಾಗವಾದಾಗ ನಂತರ, ಮೂರನೇ ಎರಡು ಭಾಗದಷ್ಟು ಎಂದು ತಿದ್ದುಪಡಿ ತರಲಾಗಿತ್ತು. ಕಾನೂನು ಚಾಪೆ ಕೆಳಗೆ ನುಸುಳುವುದನ್ನು ತಪ್ಪಿಸಲು ಯತ್ನಿಸಿದರೆ, ಇವರು ಇನ್ನೂ ರಂಗೋಲಿ ಕೆಳಗೆ ತೂರುವಂತೆ ರಾಜೀನಾಮೆ ನೀಡಿ, ಬೇರೆ ಪಕ್ಷ ಸೇರಿ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ನಿಂತು ಗೆಲ್ಲುವ ಮೂಲಕ ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ್ತೊಂದು ಪಕ್ಷಕ್ಕೆ ಸೇರಿ ಅಲ್ಲಿಂದ ಆಯ್ಕೆ ಬಯಸುವುದೂ ಕೂಡಾ ಪಕ್ಷಾಂತರವೇ. ಇದನ್ನು ತಪ್ಪಿಸುಸುವುದು ಹೇಗೆ, ಇಂಥ ಸಂದರ್ಭದಲ್ಲಿ ಪದೇ ಪದೇ ಆಗುವ ಸಾರ್ವಜನಿಕ ವೆಚ್ಚಕ್ಕೆ ಯಾರು ಹೊಣೆ, ಪ್ರಸ್ತುತ ಇಂಥ ವಿಚಾರಗಳು ಚರ್ಚೆಯಾಗಬೇಕಿದೆ ಎಂದರು.
ಯಾರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಡುತ್ತಾರೋ ಅವರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು. ಒಂದು ವೇಳೆ ಆಮಿಷಕ್ಕೆ ಒಳಗಾಗಿ ರಾಜೀನಾಮೆ ಕೊಟ್ಟಿದ್ದು ಸಾಬೀತಾದರೆ, ಅಂಥವರನ್ನು ಕನಿಷ್ಟ ಎರಡು ಅವಧಿಗೆ ಚುನಾವಣೆಯಿಂದ ಬಹಿಷ್ಕರಿಸುವ ಕಾನೂನು ರೂಪುಗೊಳ್ಳಬೇಕು. ಇದರಿಂದ ಸ್ವಲ್ಪ ಮಟ್ಟಿನ ಸುಧಾರಣೆ ತರಬಹುದೇನೋ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ವಿವರಿಸಿದರು.
ಕಳೆದ ಬಾರಿ ನಾವು ನಮ್ಮ ರಾಜಕಾರಣದ ನಿರ್ವಹಿಸಿದ ರೀತಿಯಿಂದಾಗಿ ಸೋಲು ಅನುಭವಿಸಬೇಕಾಯಿತೇ ಹೊರತು, ಜಯಚಂದ್ರ ಅಭಿವೃದ್ಧಿಯಾಗಲೀ, ಕೆಲಸವಾಗಲೀ ಮಾಡಿರಲಿಲ್ಲ ಎನ್ನುವ ಕಾರಣಕ್ಕಲ್ಲ. ನೀರಿನ ವಿಚಾರದಲ್ಲಿ ಜಯಚಂದ್ರ ಅವರನ್ನು ಮೀರಿಸಿದವರಿಲ್ಲ. ಕಾನೂನು ಮತ್ತು ಸಂಸದೀಯ ವ್ಯವಹಾರಗಳನ್ನು ನಿರ್ವಹಿಸುವ ಅನುಭವದ ಕಾರಣಕ್ಕೆ ಅವರ ಆಯ್ಕೆ ಸೂಕ್ತ ಎಂದು ನನ್ನ ಅಭಿಪ್ರಾಯ ಎಂದರು.
ಜಾತಿ ಧರ್ಮ ಮೀರಿದ
ರಾಜಕಾರಣ ಬೇಕು

ಸಿರಾ, ಅ. ಎರಡು ರಾಷ್ಟ್ರೀಯ ಪಕ್ಷಗಳು ಇದ್ದಾಗ್ಯೂ, ಪಕ್ಷೇತರರನ್ನು ಗೆಲ್ಲಿಸಿದ ಜಿಲ್ಲೆ ಇದು ಇಲ್ಲಿ ಭಾವನಾತ್ಮಕ ಅಂಶ ಹೇಗೆ ಕೆಲಸ ಮಾಡುತ್ತದೆ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಂಕರ್, ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಮಂಡಲ್ ಕಮೀಷನ್ ಮೂಲಕ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಮೀಸಲಾತಿ ಕೊಡಲು ಯತ್ನಿಸಿದಾಗ, ಅದ್ವಾನಿಯವರ ರಥಯಾತ್ರೆ ಆರಂಭಗೊಂಡಿದ್ದು. ಮಂಡಲ್ ವರ್ಸಸ್ ಕಮಂಡಲ್ ಎಂದು ದೇಶದ ರಾಜಕಾರಣ ದೃವೀಕರಣಕ್ಕೆ ನಾಂದಿಯಾಯಿತು. ಇದು ಹೊಸದೇನಲ್ಲ. ಜಾತಿ, ಮತ ವಾಸ್ತವ. ಆದರೆ ಅದು ಖಾಸಗಿ ವಿಷಯವಾಗಿತ್ತು. ಈಗ ಅದು ಚುನಾವಣಾ ವಿಷಯವಾಗಿ ಮುನ್ನೆಲೆಗೆ ಬಂದಿದೆ. ಇದು ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವಾಗಲೂ ಲೆಕ್ಕಾಚಾರ ಹಾಕುವಷ್ಟು ಬೆಳೆದಿದೆ. ಅದನ್ನು ಮೀರಿದ ಬೇಕಾದಷ್ಟು ಉದಾಹರಣೆಗಳೂ ಇವೆ. ವೀರಪ್ಪ ಮೊಯಿಲಿ, ಧರ್ಮಸಿಂಗ್, ದೇವರಾಜ ಅರಸು, ಪಿ.ಜಿ.ಆರ್ ಸಿಂಧ್ಯ ಆಯ್ಕೆ, ರಾಮಕೃಷ್ಣ ಹೆಗಡೆ, ರಮೇಶ್ ಕುಮಾರ್, ವೈ.ಎಸ್.ವಿ.ದತ್ತ ಮೊದಲಾದವರು ಜಾತಿಯ ಮಿತಿಯನ್ನು ಮೀರಿ ಆಯ್ಕೆಗೊಂಡವರು. ನಮಗೆ ಜಾತಿ ಧರ್ಮ ಮೀರಿದ ರಾಜಕಾರಣ ಬೇಕು. ಆದರೆ, ಜಾತಿಯನ್ನು ತುಷ್ಟೀಕರಿಸುವ ಪರಿಪಾಠ ಎಲ್ಲ ಪಕ್ಷಗಳಲ್ಲೂ ಬೆಳೆದಿದೆ. ನನ್ನ ಅನುಭವದಲ್ಲಿ ಕಮ್ಯುನಿಷ್ಟರು ಮಾತ್ರ ಜಾತಿಯನ್ನು ಕಡೆಗಣಿಸಿ, ವಿಷಯಾಧಾರಿತವಾಗಿ ಬೆಳೆದಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಷಡಕ್ಷರಿ, ಸಿರಾ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್. ಮಂಜುನಾಥ್, ಹಲಗುಂಡೆಗೌಡ, ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.